ರಾಕ್ಷಸರಂತೆ ವರ್ತಿಸುವ ಜನರಿಗೆ ಮಾನವ ಹಕ್ಕು ಕೂಡ ಇಲ್ಲ. ಅವರ ತಲೆಯನ್ನು ರಾವಣನ ತಲೆಯಂತೆ ಕತ್ತರಿಸಬೇಕು ಎಂದು ಪೊಲೀಸರಿಗೆ ಹೇಳಿದ್ದೆ.

ಆಗ್ರಾ(ಫೆ.10): ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಪಾದಿಸುವ ಭರದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ನಾಲಿಗೆ ಹರಿಯಬಿಟ್ಟಿದ್ದಾರೆ. ನಾನು ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಅತ್ಯಾಚಾರಿಗಳನ್ನು ಸಂತ್ರಸ್ತರ ಎದುರೇ ಚಿತ್ರಹಿಂಸೆಗೆ ಗುರಿಪಡಿಸಿದ್ದೆ ಎನ್ನುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಗ್ರಾದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಉಮಾ ಭಾರತಿ, ಬುಲಂದ್‌'ಶಹರ್‌'ನಲ್ಲಿ 2016ರ ಆಗಸ್ಟ್‌ನಲ್ಲಿ ದರೋಡೆಕೋರರು ತಾಯಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದನ್ನು ಪ್ರಸ್ತಾಪಿಸಿದರು. ಅತ್ಯಾಚಾರಿಗಳನ್ನು ತಲೆಕೆಳಗಾಗಿ ನೇತುಹಾಕಿ ಚರ್ಮ ಸುಲಿಯುವಂತೆ ಹೊಡೆದು, ಗಾಯದ ಮೇಲೆ ಉಪ್ಪು- ಮೆಣಸಿನ ಪುಡಿಯನ್ನು ಹಾಕಬೇಕು. ಅತ್ಯಾಚಾರಿಗಳು ಪ್ರಾಣಭಿಕ್ಷೆಗಾಗಿ ಅಂಗಲಾಚಬೇಕು. ನಾನು 2003-2004ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಅತ್ಯಾಚಾರಿಗಳಿಗೆ ಇದೇ ರೀತಿ ಶಿಕ್ಷೆ ನೀಡಿದ್ದೆ ಎಂದು ಹೇಳಿದರು.

ತಪ್ಪಿತಸ್ಥರಿಗೆ ಈ ರೀತಿಯ ಶಿಕ್ಷೆ ನೀಡುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು. ರಾಕ್ಷಸರಂತೆ ವರ್ತಿಸುವ ಜನರಿಗೆ ಮಾನವ ಹಕ್ಕು ಕೂಡ ಇಲ್ಲ. ಅವರ ತಲೆಯನ್ನು ರಾವಣನ ತಲೆಯಂತೆ ಕತ್ತರಿಸಬೇಕು ಎಂದು ಪೊಲೀಸರಿಗೆ ಹೇಳಿದ್ದೆ. ಅತ್ಯಾಚಾರಿಗಳಿಗೆ ಚಿತ್ರಹಿಂಸೆ ನೀಡುವುದನ್ನು ಸಂತ್ರಸ್ತೆ ನೋಡಬೇಕು. ಇದರಿಂದ ಆಕೆಗೆ ಕೊಂಚ ಸಮಾಧಾನವಾಗುತ್ತದೆ ಎಂದು ತಿಳಿಸಿದರು.

ಅತ್ಯಾಚಾರಿಗಳು ಜಾಮೀನು ಪಡೆದು ಹೊರಬರದಂತೆ ತಡೆಯಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಂಸದೆಯೂ ಆಗಿರುವ ಅವರ ಪತ್ನಿ ಡಿಂಪಲ್ ಯಾದವ್ ಅವರು, ಅತ್ಯಾಚಾರ ಸಂತ್ರಸ್ತೆಯರನ್ನು ಭೇಟಿ ಮಾಡದೇ ಅಖಿಲೇಶ್‌'ಗಾಗಿ ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು.

ನಾವು ಗೋವು, ರಾಮ ಹಾಗೂ ಗಂಗೆಯ ಬಗ್ಗೆ ಮಾತಾಡಿದರೆ, ದೇಶವನ್ನು ವಿಭಜಿಸುವ ಆಪಾದನೆಯನ್ನು ಕೇಳಬೇಕಾಗುತ್ತದೆ. ಆದರೆ, ವಿಭಜನೆ ಮಾಡಿದ್ದು ಕಾಂಗ್ರೆಸ್ ಪಕ್ಷ. ವಿಭಜನೆಯಾಗಿರುವ ಭಾಗಗಳನ್ನು ಮರಳಿ ಪಡೆಯಲು ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ಉಮಾ ಭಾರತಿ ಅವರು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2016ರ ಸೆಪ್ಟೆಂಬರ್‌'ನಲ್ಲಿ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದ ಸಂದರ್ಭದಲ್ಲಿ ‘ಸರ್ಜಿಕಲ್ ದಾಳಿಗೆ ಸಾಕ್ಷ್ಯ ಕೇಳುವವರು ಪಾಕಿಸ್ತಾನಕ್ಕೆ ಹೋಗಬೇಕು’ ಎಂದು ಹೇಳಿದ್ದರು.