Asianet Suvarna News Asianet Suvarna News

ಫ್ಲೈಟ್'ನಲ್ಲಿ ಹುಡುಗಿಗೆ ಲೈಂಗಿಕ ಕಿರುಕುಳ: ಭಾರತೀಯ ಮೂಲದ ವ್ಯಕ್ತಿಗೆ ಜೈಲುಶಿಕ್ಷೆ

ಸುಮನ್ ದಾಸ್'ರ ಒಂದು ಪಕ್ಕದಲ್ಲಿ 18 ವರ್ಷದ ಲಂಡನ್ ಹುಡುಗಿ ಆಸೀನಳಾಗಿರುತ್ತಾಳೆ. ಈ ವೇಳೆ, ಸುಮನ್ ದಾಸ್ ತಾನು ಮಲಗಿರುವೆನೆಂದು ಭಾವಿಸಿ ಅಶ್ಲೀಲ ರೀತಿಯಲ್ಲಿ ತನ್ನ ಮೈಮುಟ್ಟಿದನೆಂಬುದು ಆ ಹುಡುಗಿ ಆರೋಪ.

indian origin man suman das jailed for sexually assaulting teen on uk flight

ಲಂಡನ್(ಅ. 29): ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಭಾರತೀಯ ಮೂಲದ ಉದ್ಯಮಿ ಸುಮನ್ ದಾಸ್'ನಿಗೆ 20 ವಾರಗಳ ಸೆರೆಮನೆವಾಸದ ಶಿಕ್ಷೆ ಸಿಕ್ಕಿದೆ. ದೋಹಾದಿಂದ ಮ್ಯಾಂಚೆಸ್ಟರ್'ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ 18 ವರ್ಷದ ಹುಡುಗಿಗೆ ಸುಮನ್ ದಾಸ್ ಲೈಂಗಿಕ ಕಿರುಕುಳ ನೀಡಿದ್ದು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಿತ್ತು. ಮ್ಯಾಂಚೆಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ 46 ವರ್ಷದ ಸುಮನ್'ಗೆ 20 ವಾರದ ಜೈಲುಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.

ಏನಿದು ಪ್ರಕರಣ?
ಖತಾರ್'ನಲ್ಲಿ ನೆಲಸಿರುವ ಸುಮನ್ ದಾಸ್ ತನ್ನ ಪತ್ನಿಯೊಂದಿಗೆ ಜುಲೈ ತಿಂಗಳಲ್ಲಿ ಯೂರೋಪ್ ಪ್ರವಾಸ ಕೈಗೊಂಡಿರುತ್ತಾರೆ. ದೋಹಾದಿಂದ ಮ್ಯಾಂಚೆಸ್ಟರ್'ಗೆ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಸುಮನ್ ದಾಸ್'ರ ಒಂದು ಪಕ್ಕದಲ್ಲಿ 18 ವರ್ಷದ ಲಂಡನ್ ಹುಡುಗಿ ಆಸೀನಳಾಗಿರುತ್ತಾಳೆ. ಈ ವೇಳೆ, ಸುಮನ್ ದಾಸ್ ತಾನು ಮಲಗಿರುವೆನೆಂದು ಭಾವಿಸಿ ಅಶ್ಲೀಲ ರೀತಿಯಲ್ಲಿ ತನ್ನ ಮೈಮುಟ್ಟಿದನೆಂಬುದು ಆ ಹುಡುಗಿ ಆರೋಪ.

ನ್ಯಾಯಾಲಯದ ವಿಚಾರಣೆ ವೇಳೆ ಸುಮನ್ ದಾಸ್ ಈ ಆರೋಪವನ್ನು ತಳ್ಳಿಹಾಕಿದ್ದರು. "ನಾನು ಆಕೆಯನ್ನು ಉದ್ದೇಶಪೂರ್ವಕವಾಗಿ ಮುಟ್ಟಲಿಲ್ಲ. ಆದದ್ದು ಆಕಸ್ಮಿಕವಾಗಿಯಷ್ಟೇ... ಕುಳಿತ ಸೀಟಿನಲ್ಲಿ ಮೈಕೈ ಸಡಿಸಿಲಿದ್ದರಿಂದ ಆಕಸ್ಮಿಕವಾಗಿ ಆಕೆಯ ಮೈಗೆ ತಾಕಿರಬಹುದಷ್ಟೇ" ಎಂದು ಸುಮನ್ ದಾಸ್ ವಾದಿಸಿದ್ದರು.

ಆದರೆ, ಇಂಗ್ಲೆಂಡ್'ನ ಆ 18 ವರ್ಷದ ಹುಡುಗಿ ತನ್ನ ಆರೋಪವನ್ನು ಸಮರ್ಥಿಸಿಕೊಳ್ಳುತ್ತಾಳೆ. "ಆತನಿಗೆ ತಾನು ಏನು ಮಾಡುತ್ತಿದ್ದೇವೆಂಬ ಸ್ಪಷ್ಟ ಅರಿವು ಇತ್ತು. ಆತ ಮಲಗಿರಲಿಲ್ಲ. ನನ್ನತ್ತ ನೋಡುತ್ತಿದ್ದುದನ್ನು ನಾನು ಕಂಡೆ. ನಾನು ಎಚ್ಚರವಾಗಿದ್ದೀನೋ ಇಲ್ಲವೋ ಎಂಬುದನ್ನು ನೋಡಲು ಆತ ನನ್ನತ್ತ ದೃಷ್ಟಿ ಹರಿಸಿದ್ದ. ನಾನು ಎಚ್ಚರವಾಗಿರುವುದು ಗೊತ್ತಾದ ಬಳಿ ಆತ ಕೂಡಲೇ ಹಿಂದೆ ಸರಿದುಬಿಟ್ಟ" ಎಂದು ಆ ಹುಡುಗಿ ಹೇಳಿಕೆ ನೀಡಿದ್ದಳು.

ಪತ್ನಿಯೂ ಜೊತೆಯಲ್ಲಿದ್ದಳು:
ಈ ಘಟನೆ ನಡೆಯುವಾಗ ಸುಮನ್ ದಾಸ್'ನ ಇನ್ನೊಂದು ಬದಿಯಲ್ಲಿ ಆತನ ಪತ್ನಿ ಸೋನಿಯಾ ಇದ್ದರು. ತನಗೆ ಇದ್ಯಾವುದೂ ಗೊತ್ತಿಲ್ಲ. ಗಂಡನ ಬಗ್ಗೆ ಸಂಪೂರ್ಣ ವಿಶ್ವಾಸ ಈಗಲೂ ಇದೆ ಎಂದೇ ಆ ಗೃಹಿಣಿ ಹೇಳುತ್ತಾಳೆ.

ಆದರೆ, ನ್ಯಾಯಾಲಯದ ವಿಚಾರಣೆಯಲ್ಲಿ 18 ವರ್ಷದ ಹುಡುಗಿ ಮಾಡಿದ ಆರೋಪಗಳು ಸತ್ಯವೆಂದು ಸಾಬೀತಾಯಿತು. 46 ವರ್ಷದ ಸುಮನ್ ದಾಸ್'ರನ್ನು 20 ವಾರಗಳ ಕಾಲ ಸೆರೆಮನೆ ವಾಸಕ್ಕೆ ತಳ್ಳಿತು. ಜೊತೆಗೆ 115 ಪೌಂಡ್(12 ಸಾವಿರ ರೂ.) ಹಣವನ್ನು ಹುಡುಗಿಗೆ ಪರಿಹಾರ ರೂಪದಲ್ಲಿ ಕೊಡಬೇಕೆಂದು ಆದೇಶಿಸಿತು. ಅಷ್ಟೇ ಅಲ್ಲ, 20 ವರ್ಷದ ಜೈಲುಶಿಕ್ಷೆಯ ಬಳಿಕ ಸುಮನ್ ದಾಸ್ ಒಂದು ವರ್ಷಗಳ ಕಾಲ ಬ್ರಿಟನ್'ನಲ್ಲಿಯೇ ವಾಸ ಮಾಡಬೇಕು. ಈ ಅವಧಿಯಲ್ಲಿ ಅವರ ವರ್ತನೆಯ ಮೇಲೆ ನಿಗಾ ಇರಿಸಬೇಕು ಎಂದು ಬ್ರಿಟನ್'ನ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಒಂದು ವೇಳೆ, ಅವರು ಇಂಥದ್ದೇ ದುರ್ವರ್ತನೆ ತೋರಿದರೆ ಸುಮನ್ ದಾಸ್'ಗೆ ಮತ್ತೆ ಶಿಕ್ಷೆ ನೀಡಲಾಗುತ್ತದೆ.

Follow Us:
Download App:
  • android
  • ios