ನವದೆಹಲಿ[ಸೆ.12]: ಗಡಿ ನಿಯಂತ್ರಣಾ ರೇಖೆಯ ಬಳಿ ಇರುವ ಭಯೋತ್ಪಾದಕರಿಗೆ ಸಂದೇಶಗಳನ್ನು ನೀಡಲು ಪಾಕಿಸ್ತಾನ ಎಫ್‌ಎಂ ಪ್ರಸರಣ ಕೇಂದ್ರಗಳನ್ನು ಸ್ಥಾಪಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಸೇನೆ ಎಫ್‌ಎಂ ಸ್ಟೇಷನ್ ಮೂಲಕ ರವಾನಿಸಿರುವ ಕೆಲವು ಕೋಡ್ ವರ್ಡ್ (ರಹಸ್ಯ ಪದ)ಗಳನ್ನು ಬೇಧಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಪಾಕ್‌ನಲ್ಲಿರುವ ವಿವಿಧ ಉಗ್ರಗಾಮಿ ಸಂಘಟನೆಗಳು ಜಮ್ಮು- ಕಾಶ್ಮೀರದಲ್ಲಿರುವ ಉಗ್ರರಿಗೆ ಸಂದೇಶ ರವಾನಿಸಲು ಇದು ಬಳಕೆಯಾಗುತ್ತಿತ್ತು.

ಗಡಿ ನಿಯಂತ್ರಣಾ ರೇಖೆಯ ಗುಂಟ ಎಫ್‌ಎಂ ಪ್ರಸರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜೈಷ್ ಎ ಮೊಹಮ್ಮದ್ ಸಂಘಟ ನೆಗೆ ಸಂದೇಶ ನೀಡಲು (66/88), ಲಷ್ಕರ್ ಎ ತೊಯ್ಬಾಗೆ (ಎ3) ಮತ್ತು ಅಲ್ ಬದರ್‌ಗೆ (ಡಿ9) ಕೋಡ್ ವರ್ಡ್ ಬಳಕೆಯಾಗುತ್ತಿತ್ತು. ಗಡಿಯ ಸಮೀಪ ಇರುವ ಉಗ್ರರು ಈ ಸಂದೇಶಗಳನ್ನು ಸ್ವೀಕರಿಸುತ್ತಿದ್ದರು ಮತ್ತು ಹಿಂಸಾಚಾರ ಸೃಷ್ಟಿಸಲು ಇತರಿಗೆ ಸಂದೇಶ ರವಾನಿಸುತ್ತಿದ್ದರು ಎನ್ನಲಾಗಿದೆ.