ನಮ್ಮ ದೇಶದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಇತರೆ ಎಲ್ಲಾ ದೇಶಗಳಿಗಿಂತಲೂ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು ನಮ್ಮಲ್ಲೇ ಹೆಚ್ಚಿದ್ದಾರೆ. ಶುದ್ಧ ಕುಡಿಯುವ ನೀರಿನ ಲಭ್ಯತೆ ಉಳಿದೆಲ್ಲಾ ದೇಶಗಳಿಗಿಂತ ಕಡಿಮೆ ಇದೆ.
ಬೆಂಗಳೂರು (ಡಿ.26): ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಅಪೌಷ್ಟಿಕತೆ, ಶುದ್ಧ ನೀರಿನ ಕೊರತೆ, ಆರೋಗ್ಯ ಹಾಗೂ ಶಿಕ್ಷಣ ಕೊರತೆ ಇನ್ನಿಲ್ಲದಂತೆ ಕಾಡುತ್ತಿದ್ದರೂ ಬೇರೆ ದೇಶಗಳಿಂದ ಏನೂ ಕಲಿಯುವುದಿಲ್ಲ ಎಂಬುದು ಮೂರ್ಖತನ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸುವ ಗುಣ ಬೆಳೆಸಿ ಕೊಳ್ಳಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಗಾಂಧಿಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಅವರ ಜತೆಗೂಡಿ ‘ಸಮಾಜ ಮುಖಿ’ ಮಾಸ ಪತ್ರಿಕೆಯ ಮೊದಲ ಸಂಚಿಕೆ ಲೋಕಾರ್ಪಣೆ ಮಾಡಿದರು.
ನಮ್ಮ ದೇಶದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಇತರೆ ಎಲ್ಲಾ ದೇಶಗಳಿಗಿಂತಲೂ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು ನಮ್ಮಲ್ಲೇ ಹೆಚ್ಚಿದ್ದಾರೆ. ಶುದ್ಧ ಕುಡಿಯುವ ನೀರಿನ ಲಭ್ಯತೆ ಉಳಿದೆಲ್ಲಾ ದೇಶಗಳಿಗಿಂತ ಕಡಿಮೆ ಇದೆ. ಗಂಗಾ, ಕಾವೇರಿ, ಕೃಷ್ಣಾ ಸೇರಿದಂತೆ ಎಲ್ಲಾ ಜೀವನದಿಗಳು ಕೊಳಕಾಗಿರುವುದನ್ನು ಬೇರೆ ಯಾವ ದೇಶದಲ್ಲೂ ಈ ಮಟ್ಟಿಗೆ ನೋಡಲಾಗದು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಾಂಗ್ಲಾ, ಶ್ರೀಲಂಕಾಗಿಂತ ಹಿಂದೆ ಬಿದ್ದಿದ್ದೇವೆ. ಶಿಕ್ಷಣದಲ್ಲೂ ಬಹಳಷ್ಟು ಹಿಂದೆ ಬಿದ್ದಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು. ಮೂರು ಸಾವಿರ ವರ್ಷಗಳ ಹಿಂದೆ ನಮ್ಮ ದೇಶ ಉಳಿದ ದೇಶಗಳಿಗಿಂತಲೂ ಉತ್ತಮ ಸ್ಥಾನದಲ್ಲಿತ್ತು. ಆದರೆ, ಈಗಲೂ ನಾವು ಅದೇ ಭ್ರಮೆಯಲ್ಲಿ ಬದುಕಬೇ ಕಾದ ಅಗತ್ಯವಿಲ್ಲ.
ಉತ್ತಮ ವಿಷಯಗಳನ್ನು ಬೇರೆಯವರಿಂದ ಕಲಿಯುವು ದಿಲ್ಲ ಎಂಬುದು ಮೂರ್ಖತನ. ಬೇರೆ ದೇಶಗಳಲ್ಲಿ ತೆರಿಗೆ ವಂಚನೆ ಹಾಗೂ ಭ್ರಷ್ಟಾಚಾರ ನಮ್ಮ ದೇಶದಷ್ಟಿಲ್ಲ. ನಮ್ಮ ದೇಶದ ಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ನಮ್ಮ ಮೊಮ್ಮಕ್ಕಳಿಗಾದರೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಮುಕ್ತ ಹಾಗೂ ಸಮಾಜಮುಖಿ ಸಮಾಜಕ್ಕೆ ಬೇಕಿರುವುದು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸುದ್ದಿ ಮಾಧ್ಯಮ. ಇದು ಕೇವಲ ತತ್ವದಲ್ಲಿ ಮಾತ್ರವಲ್ಲ ಆಚರಣೆಯಲ್ಲೂ ಕಂಡು ಬಂದರೆ ಸಮಾಜ ಆರೋಗ್ಯಕರವಾಗಿರಲು ಸಾಧ್ಯ. ‘ಸಮಾಜಮುಖಿ’ ಪತ್ರಿಕೆ ಬೆಳೆದು ಈ ಉದ್ದೇಶ ಈಡೇರಿಸಲಿ ಎಂದರು.
ಕೊಲೆ ಮಾಡುವ ಕಾಲ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ಮಾಧ್ಯಮಗಳು ಇಲ್ಲದಿದ್ದರೆ ನಾವೆಲ್ಲಾ ಇಲ್ಲ ಎನ್ನುವ ಸ್ಥಿತಿಯಿದೆ. ಸ್ವಾತಂತ್ರ್ಯಪೂರ್ವ ಹಾಗೂ ನಂತರದ ಕಾಲದಲ್ಲೂ ಮಾಧ್ಯಮಗಳು ದೇಶ ಕಟ್ಟಲು ನೆರವಾಗಿದ್ದವು. ಮುದ್ರಣ ಮಾಧ್ಯಮಗಳು ಈಗಲೂ ಈ ಬದ್ಧತೆ ಉಳಿಸಿಕೊಂಡಿದ್ದು, ವಿದ್ಯುನ್ಮಾನ ಮಾಧ್ಯಮಗಳಿಗೆ ಈ ಬದ್ಧತೆ ಇಲ್ಲ. ಏಕೆಂದರೆ ಅವರಿಗೆ ಇತಿಹಾಸ ಗೊತ್ತಿಲ್ಲ. ಕನಿಷ್ಠ ಇತಿಹಾಸ ಅಧ್ಯಯನ ಆದರೂ ಮಾಡಬೇಕಾಗಿತ್ತು. ವಿದ್ಯುನ್ಮಾನ ಮಾಧ್ಯಮದ ಸ್ಥಿತಿ ಮಕ್ಕಳ ಕೈಗೆ ಬ್ಲೇಡ್ ನೀಡಿದ ಸ್ಥಿತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜಮುಖಿ ಎಂಬ ಪದವೇ ಅರ್ಥ ಕಳೆದುಕೊಳ್ಳುತ್ತಿದೆ. ಅಂತಹ ಸಮಾಜದಲ್ಲಿ ‘ಸಮಾಜಮುಖಿ’ ಎಂಬ ಹೆಸರಿನಲ್ಲೇ ಪತ್ರಿಕೆ ತರುತ್ತಿರುವುದು ಶ್ಲಾಘನೀಯ. ಕನ್ನಡದ ಜತೆಗೆ ತಂತ್ರಜ್ಞಾನ ಬೆರೆತರೆ ಕನ್ನಡವು ಅನ್ನದ ಭಾಷೆಯಾಗುತ್ತದೆ. ಇದನ್ನು ಸಾಧಿಸಿ ತೋರಿಸಿದವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ನಾರಾಯಣಮೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಮುಖಿ ಮಾಸಪತ್ರಿಕೆ ಸಂಪಾದಕ ಚಂದ್ರಕಾಂತ್ ವಡ್ಡು, ಸಂಪಾದಕೀಯ ಸಲಹೆಗಾರ ಪೃಥ್ವಿದತ್ತ ಚಂದ್ರಶೋಭಿ ಹಾಜರಿದ್ದರು.
