ನವದೆಹಲಿ(ಅ. 07): ಮುಂಬರುವ ವರ್ಷಗಳಲ್ಲಿ ಚೀನಾ ಮಟ್ಟಕ್ಕೆ ಭಾರತ ಬೆಳೆಯಬಲ್ಲುದು ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು, 15 ವರ್ಷಗಳಲ್ಲಿ ಭಾರತದ ಆರ್ಥಿಕತೆ ಐದು ಪಟ್ಟು ಹೆಚ್ಚು ಬೆಳೆಯುವ ಶಕ್ತಿ ಹೊಂದಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ, 2 ಟ್ರಿಲಿಯನ್ ಡಾಲರ್(2 ಶತಕೋಟಿ ಡಾಲರ್) ಇರುವ ಭಾರತದ ಆರ್ಥಿಕತೆ 10 ಟ್ರಿಲಿಯನ್ ಡಾಲರ್ ಮಟ್ಟ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಪನಗರಿಯಾ ಹೇಳುವ ಪ್ರಕಾರ ಕಳೆದ 15 ವರ್ಷಗಳಲ್ಲಿ ಚೀನಾ ಮಾಡಿದ ಸಾಧನೆಯನ್ನು ಮುಂದಿನ 15 ವರ್ಷಗಳಲ್ಲಿ ಭಾರತ ಮಾಡುವ ಸಾಮರ್ಥ್ಯ ಹೊಂದಿದೆ. 15 ವರ್ಷಗಳ ಹಿಂದೆ 2 ಟ್ರಿಲಿಯನ್ ಇದ್ದ ಚೀನಾ ಆರ್ಥಿಕತೆ ಇದೀಗ 10 ಟ್ರಿಲಿಯನ್ ಡಾಲರ್ ಮುಟ್ಟಿದೆ. ಭಾರತವು ಮುಂದಿನ 15 ವರ್ಷ ಈ ಪರಿಯ ಪ್ರಗತಿ ಸಾಧಿಸಬೇಕಾದರೆ ಪ್ರತೀ ವರ್ಷ ಶೇ. 10ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸದ್ಯ ಯೋಜನಾ ಆಯೋಗದ ಬದಲಾಗಿ ಚಾಲನೆಗೆ ತರಲಾಗಿರುವ ನೀತಿ ಆಯೋಗವು ಮುಂದಿನ 15 ವರ್ಷದ ಆರ್ಥಿಕ ರೂಪುರೇಖೆಯ ಬ್ಲೂಪ್ರಿಂಟ್ ತಯಾರಿಸುತ್ತಿದೆ. ಚೀನಾ ಜೊತೆ ನಿಕಟ ಆರ್ಥಿಕ ವ್ಯವಹಾರ ಇಟ್ಟುಕೊಳ್ಳುವುದು ಈ ರೂಪುರೇಖೆಯ ಪ್ರಮುಖ ಅಂಶವೆನ್ನಲಾಗಿದೆ. ಚೀನಾ ಸದ್ಯ ತನ್ನಲ್ಲಿರುವ ಬಂಡವಾಳವನ್ನು ಬೇರೆ ಕಡೆ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದೆ. ಇತ್ತ ಭಾರತಕ್ಕೆ ತನ್ನ ಉತ್ಪಾದನಾ ಕ್ಷೇತ್ರಕ್ಕೆ ಪುಷ್ಟಿ ನೀಡಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಂಡವಾಳದ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ವಿದೇಶೀ ನೇರ ಬಂಡವಾಳವನ್ನು ಮುಕ್ತವಾಗಿ ಆಹ್ವಾನಿಸುತ್ತಿದೆ. ಹೀಗಾಗಿ, ಭಾರತ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧವು ಕೊಡು-ತೆಗೆದುಕೊಳ್ಳುವ ವ್ಯವಹಾರವಾಗಿದೆ. ಇದರಿಂದ ಎರಡೂ ದೇಶಗಳ ಆರ್ಥಿಕತೆಗೆ ಪರಸ್ಪರ ಪೂರಕವಾಗಲಿದೆ ಎಂಬುದು ಅರವಿಂದ್ ಪನಗರಿಯಾ ಅವರ ಕಾರ್ಯತಂತ್ರ.
