. ಈ ಸಂಬಂಧ ಭಾರತೀಯ-ಅಮೆರಿಕ ಪ್ರಜೆ ಉಮರ್ ರಶೀದ್ ದತ್(21) ಎಂಬ ಯುವಕನನ್ನು ಬಂಧಿಸಲಾಗಿದೆ.

ವಾಷಿಂಗ್ಟನ್(ಸೆ.15): ಅಮೆರಿಕದ ಕನ್ಸಾಸ್ ನಗರದಲ್ಲಿ ಭಾರತ ಮೂಲದ ಶ್ರೀನಿವಾಸ್ ಕೂಚಿಬೋಟ್ಲಾ ಅವರ ಹತ್ಯೆ ಘಟನೆ ಮರೆಯುವ ಮುನ್ನವೇ, ಅದೇ ನಗರದಲ್ಲಿ ಭಾರತ ಮೂಲದ ಮನೋರೋಗ ವೈದ್ಯರೊಬ್ಬರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಈಸ್ಟ್ ವಿಚಿತಾ ಎಂಬಲ್ಲಿ ಅವರ ಕ್ಲಿನಿಕ್‌ನಲ್ಲಿಯೇ ಬುಧವಾರದಂದು ಚಾಕು ಇರಿದು ತೆಲಂಗಾಣ ಮೂಲದ ಮನೋರೋಗ ತಜ್ಞ ಅಚ್ಯುತ ರೆಡ್ಡಿ ಅವರನ್ನು ಕೊಲ್ಲಲಾಗಿದೆ. ಈ ಸಂಬಂಧ ಭಾರತೀಯ-ಅಮೆರಿಕ ಪ್ರಜೆ ಉಮರ್ ರಶೀದ್ ದತ್(21) ಎಂಬ ಯುವಕನನ್ನು ಬಂಧಿಸಲಾಗಿದೆ.

ಬುಧವಾರ ಸಂಜೆಯೇ ವೈದ್ಯನನ್ನು ಹತ್ಯೆಗೈದು ರಕ್ತಮಯವಾದ ಬಟ್ಟೆಯಲ್ಲೇ ಕಾರು ಪಾರ್ಕಿಂಗ್‌ನಲ್ಲಿ ಕುಳಿತಿದ್ದ ಆರೋಪಿ ಬಗ್ಗೆ ಅನುಮಾನನಗೊಂಡ ಭದ್ರತಾ ಸಿಬ್ಬಂದಿ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಕಂಟ್ರಿ ಕ್ಲಬ್‌ನಲ್ಲಿ ಬಂಧಿಸಿದ್ದರು. ಈ ಬಗ್ಗೆ ನಡೆಸಿದ ವಿಚಾರಣೆ ವೇಳೆ ಶಂಕಿತ ರಶೀದ್ ದತ್, ಕೊಲೆಗೀಡಾದ ವೈದ್ಯರ ಗ್ರಾಹಕನಾಗಿದ್ದು, ಆಗಾಗ್ಗೆ ವೈದ್ಯರ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ಎಂದು ತಿಳಿದುಬಂದಿದೆ. ಆದರೆ, ವೈದ್ಯನ ಕೊಲೆಗೆ ಏನು ಕಾರಣ ಎಂಬುದರ ಬಗ್ಗೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.