ಪಂಜಾಬ್‌ನಲ್ಲಿ ಸಂಬಂಧಗಳನ್ನು ನುಚ್ಚು ನೂರಾಗಿಸುವ ಘಟನೆಯೊಂದು ನಡೆದಿದೆ. ಈ ಸುದ್ದಿ ಕೇಳಿದರೆಲ್ಲರೂ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ. ಹುಡುಗಿಯೊಬ್ಬಳು ತನ್ನ ಒಡಹುಟ್ಟಿದ ಅಣ್ಣನನ್ನೇ ವರಿಸಿದ್ದು, ಇದರ ಹಿಂದಿನ ಕಾರಣ ಮಾತ್ರ ಬಹಳಷ್ಟು ವಿಚಿತ್ರವಾಗಿದೆ. 

ಹೌದು ತಾನು ಆಸ್ಟ್ರೇಲಿಯಾಗೆ ಹೋಗಬೇಕು ಎಂಬ ಒಂದೇ ಒಂದು ಆಸೆಗೆ ಕಟುಬಿದ್ದ ತಂಗಿ ಅಣ್ಣನನ್ನೇ ವರಿಸಿದ್ದಾಳೆ. ಮದುವೆಯಾದ ಬಳಿಕ ತನ್ನಿಚ್ಛೆಯಂತೆ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಗೆ ಹಾರಿದ್ದಾಳೆ. ಆದರೆ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. 

ಈ ಮದುವೆಯಾಟದಲ್ಲಿ ವಧು ಹಾಗೂ ವರ[ಅಣ್ಣ-ತಂಗಿ]ಯ ಪೋಷಕರು ಹಾಗೂ ಕುಟುಂಬಸ್ಥರೂ ಶಾಮೀಲಾಗಿದ್ದರೆಂಬುವುದು ಮತ್ತೂ ಅಚ್ಚರಿ ಮೂಡಿಸಿದೆ. ವೀಸಾ ಸಮಸ್ಯೆ ಇದ್ದ ಕಾರಣ ಯುವತಿಗೆ ಆಸ್ಟ್ರೇಲಿಯಾಗೆ ಹೋಗುವುದು ಅಸಾಧ್ಯವಾಗಿತ್ತು. ಹೀಗಾಗಿ ಆಕೆ ತನ್ನ ಅಣ್ಣನನ್ನೇ ವರಿಸಿದ್ದಾಳೆನ್ನಲಾಗಿದೆ.

ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ತನಿಖೆಯಿಂದ ಈವರೆಗೂ ಯುವತಿಯ ಅಣ್ಣ ಆಸ್ಟ್ರೇಲಿಯಾದ ನಾಗರಿಕ ಹಕ್ಕು ಪಡೆದಿದ್ದ, ಹೀಗಾಗಿ ಯುವತಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಗುರುದ್ವಾರದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿ, ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದಾಳೆ. ಬಳಿಕ ಆಸ್ಟ್ರೇಲಿಯಾಗೆ ಹಾರಿದ್ದಾಳೆ ಎಂದಿದ್ದಾಳೆ. ವಿದೇಶಕ್ಕೆ ಹೋಗಲು ಇವರು ಸಾಮಾಜಿಕ, ಕಾನೂನು ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರನ್ನು ಬಂಧಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಆದರೆ ಇಬ್ಬರೂ ಪರಾರಿಯಾಗುತ್ತಿದ್ದಾರೆ ಎಂದಿದ್ದಾರೆ.

ವಿದೇಶಕ್ಕೆ ಹೋಗಲು ಮೋಸ ಮಾಡುವ ವಿವಿಧ ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿವೆ. ಆದರೆ ವಿದೇಶಕ್ಕೆ ತೆರಳುವ ಸಲುವಾಗಿ ತಂಗಿಯೊಬ್ಬಳು ಸ್ವಂತ ಅಣ್ಣನೊಂದಿಗೆ ಮದುವೆಯಾಗಿದ್ದು ಮಾತ್ರ ಇದೇ ಮೊದಲೆನ್ನಬಹುದು.