ನವದೆಹಲಿ[ಆ.20]: ಪುಲ್ವಾಮ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಭಾರತದ ವಾಯುಪಡೆ ವಿಮಾನಗಳು ದಾಳಿ ನಡೆಸಿದ್ದು ಇತಿಹಾಸ. ಆದರೆ ವಾಯುಪಡೆಗೆ ಇಂಥದ್ದೊಂದು ಸೂಚನೆ ನೀಡುವ ಮುನ್ನವೇ, ಅಂಥದ್ದೊಂದು ದಾಳಿಗೆ ಭಾರತೀಯ ಭೂಸೇನೆ ಕೂಡಾ ಸನ್ನದ್ಧವಾಗಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಉಗ್ರರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದ ಬಳಿಕ ನಾನಾ ರೀತಿಯ ಪ್ರತೀಕಾರ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿತ್ತು. ಇಂಥ ವೇಳೆ ಪಾಕ್‌ ಮೇಲೆ ಸಾಂಪ್ರದಾಯಿಕ ಯುದ್ಧ ನಡೆಸಲು ನಾವು ಸಜ್ಜಾಗಿದ್ದೇವೆ. ಅಗತ್ಯಬಿದ್ದರೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿಯೂ ದಾಳಿ ನಡೆಸಬಲ್ಲೆವು ಎಂಬ ಭರವಸೆಯನ್ನು ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಅವರು ಕೇಂದ್ರ ಸರ್ಕಾರಕ್ಕೆ ನೀಡಿದ್ದರು ಎನ್ನಲಾಗಿದೆ.

ಭಾರತೀಯರ ಪಾಲಿಗೆ ಕಹಿ ನೆನಪು ಪುಲ್ವಾಮಾ ದಾಳಿ: ಏನಾಗಿತ್ತು? ಇಲ್ಲಿವೆ ಎಲ್ಲಾ ಸುದ್ದಿಗಳು

ಸೋಮವಾರ ಇಲ್ಲಿ ಕೆಲ ನಿವೃತ್ತಿ ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ವೇಳೆ ಜ.ಬಿಪಿನ್‌ ರಾವತ್‌ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಈ ಮಾಹಿತಿ ನೀಡಿದ್ದರು ಎಂದು ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ಸೇನಾನಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.