ನವದೆಹಲಿ(ಸೆ. 29): ಏನು ಮಾಡಿದರೂ ಭಾರತ ಸುಮ್ಮನಿರುತ್ತದೆ ಎಂದು ಭಾವಿಸಿದಂತಿದ್ದ ಪಾಕಿಸ್ತಾನಕ್ಕೆ ನಿನ್ನೆ ಸಖತ್ ಪೆಟ್ಟು ಸಿಕ್ಕಿದೆ. ಗಡಿ ನಿಯಂತ್ರಣ ರೇಖೆಯಲ್ಲಿರುವ ಭಯೋತ್ಪಾದನಾ ನೆಲೆಗಳ ಮೇಲೆ ಭಾರತೀಯ ಸೇನಾ ಯೋಧರು ಬುಧವಾರ ರಾತ್ರಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ಧಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಈ ನೆಲೆಗಳ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಪ್ರಯತ್ನಿಸುತ್ತಿದ್ದಾರೆಂಬ ಗುಪ್ತಚರ ಮಾಹಿತಿಯನ್ನಾಧರಿಸಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತ್ತು.
ಇಂದು ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ ಭಾರತೀಯ ಸೇನಾಧಿಕಾರಿಗಳು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸಾಕಷ್ಟು ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡಿರುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಮಾಹಿತಿ ಕೊಟ್ಟೇ ಆ ದೇಶದ ಗಡಿಭಾಗಕ್ಕೆ ನುಗ್ಗಿ ಉಗ್ರರ ಕ್ಯಾಂಪ್'ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಸೇನಾ ಮೂಲಗಳ ಪ್ರಕಾರ 30-35 ಉಗ್ರರು ಹತರಾಗಿದ್ದಾರೆ. ಆದರೆ, ಎಲ್'ಓಸಿಯಲ್ಲಿ ಭಾರತದ ಕಡೆಯಿಂದ ಯಾವುದೇ ದಾಳಿ ನಡೆದಿಲ್ಲವೆಂದು ಪಾಕಿಸ್ತಾನ ಹೇಳುತ್ತಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ ಮತ್ತೊಂದು ವರದಿ ಪ್ರಕಾರ, ಪಿಓಕೆಯ ಭಿಂಬರ್, ಹಾಟ್ ಸ್ಪ್ರಿಂಗ್, ಕೇಲ್ ಮತ್ತು ಲಿಪಾ ಸೆಕ್ಟರ್'ಗಳಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು ತಿರುಗೇಟು ನೀಡಿದ್ದಾರೆ. ಆರು ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪಾಕ್ ಯೋಧರು ಹತರಾಗಿದ್ದಾರೆಂದು ಹೇಳಲಾಗುತ್ತಿದೆ.
