ಪಾಕಿಸ್ತಾನದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಭಾರತೀಯ ಸೇನೆಯ ದಾಳಿಗೆ 11 ಮಂದಿ ಮೃತಪಟ್ಟಿದ್ದಾರಂತೆ.
ನವದೆಹಲಿ(ನ. 23): ನಿನ್ನೆ ಭಾರತೀಯ ಯೋಧನ ತಲೆ ಕತ್ತರಿಸಿದ ಘಟನೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಇಂದು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಪ್ರಹಾರ ನಡೆಸಿದೆ. ಪೂಂಚ್, ರಜೋರಿ, ಕೆಲ್ ಮತ್ತು ಮಾಚಿಲ್'ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿರುವ ಪಾಕ್ ನೆಲೆಗಳ ಮೇಲೆ ಭಾರೀ ದಾಳಿ ನಡೆಸಲಾಯಿತು. ಆದರೆ, ಎಷ್ಟು ಹಾನಿ ಸಂಭವಿಸಿತು ಎಂಬ ಅಧಿಕೃತ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿಲ್ಲ.
ಪಾಕಿಸ್ತಾನದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಭಾರತೀಯ ಸೇನೆಯ ದಾಳಿಗೆ 11 ಮಂದಿ ಮೃತಪಟ್ಟಿದ್ದಾರಂತೆ. ಆದರೆ, ಸತ್ತವರ ಪೈಕಿ ಬಹುತೇಕರು ನಾಗರಿಕರೇ ಆಗಿದ್ದಾರೆ. ಬಸ್'ನಲ್ಲಿ ಪ್ರಯಾಣಿಸುತ್ತಿದ್ದ 9 ಮಂದಿಯೂ ಭಾರತೀಯ ಸೇನೆಯ ಶೆಲ್ ದಾಳಿಗೆ ಅಸುನೀಗಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ನಿನ್ನೆ, ಮೂವರು ಭಾರತೀಯ ಸೈನಿಕರನ್ನು ಬಲಿತೆಗೆದ ಪಾಕಿಸ್ತಾನೀ ಸೈನಿಕರೂ ಇಂದೂ ಕೂಡ ಅನೇಕ ಕಡೆ ಗಡಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ನಿನ್ನೆ, ಪಾಕ್ ಸೈನಿಕರ ಬೆಂಬಲದೊಂದಿಗೆ ಉಗ್ರಗಾಮಿಗಳು ಭಾರತೀಯ ಗಡಿಯೊಳಗೆ ನುಸುಳಿ ಇಬ್ಬರು ಯೋಧರನ್ನು ಕೊಂದು, ಮತ್ತೊಬ್ಬ ಯೋಧನ ತಲೆ ಕಡಿದು ವಾಪಸ್ ಹೋಗಿದ್ದರು. ಈ ಘಟನೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಭಾರತೀಯ ಸೇನೆ, ಶತ್ರು ಸೈನಿಕರ ವಿರುದ್ಧ ತಕ್ಕ ತಿರುಗೇಟು ನೀಡುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ, ಪಾಕಿಸ್ತಾನವು ತಾನು ತಲೆ ಕಡಿಯುವಂಥ ನೀಚ ಕೃತ್ಯ ಎಸಗಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
