ಇದು ಪ್ರತೀ ವರ್ಷ ನಡೆಯುವ ಸಾಮಾನ್ಯ ಮಿಲಿಟರಿ ಕ್ರಿಯೆಯಾಗಿದೆ ಎಂದು ಕೆಲ ಮಿಲಿಟರಿ ಅಧಿಕಾರಿಗಳು ಹೇಳಿಕೆ ಉಲ್ಲೇಖಿಸಿ ವರದಿಗಳು ಬಂದಿವೆ. ಭಾರತೀಯ ಸೇನೆಯು ಪ್ರತೀ ವರ್ಷದ ಸೆಪ್ಟಂಬರ್'ನಲ್ಲಿ ಮಿಲಿಟರಿ ಕ್ರಿಯೆ ನಡೆಸುತ್ತದೆ. ಆಗೆಲ್ಲಾ ಗ್ರಾಮಗಳನ್ನು ತೆರವುಗೊಳಿಸಲಾಗುತ್ತದೆ. ಈ ವರ್ಷ ತುಸು ಮುಂಚೆಯೇ ಈ ಕ್ರಿಯೆ ಮಾಡಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿಗಳು ಹೇಳಿದ್ದಾರೆಂದು ನ್ಯೂಸ್18 ವರದಿ ಮಾಡಿದೆ.

ನವದೆಹಲಿ(ಆ. 10): ಭಾರತ ಮತ್ತು ಚೀನಾ ನಡುವೆ ಅತಿ ಶೀಘ್ರದಲ್ಲೇ ಯುದ್ಧ ಆರಂಭವಾಗುತ್ತದೆಯೇ? ಅಂಥದ್ದೊಂದು ಸೂಚನೆ ನೀಡುವಂಥ ಬೆಳವಣಿಗೆ ಗಡಿಭಾಗದಲ್ಲಿ ನಡೆದಿದೆ. ಭಾರತ-ಚೀನಾ-ಭೂತಾನ್ ಗಡಿತಾಕುವ ಡೋಕ್ಲಾಮ್'ನಲ್ಲಿನ ಗ್ರಾಮವೊಂದನ್ನು ಭಾರತೀಯ ಸೈನಿಕರು ತೆರವುಗೊಳಿಸಿದ್ದಾರೆ. ನಾಥಂಗ್ ಗ್ರಾಮದ ಎಲ್ಲಾ ಜನರನ್ನು ಕೂಡಲೇ ವಸತಿ ತೆರವು ಮಾಡಿ ಬೇರೆಡೆಗೆ ಕಳುಹಿಸಲಾಗುತ್ತಿದೆ. ಯಾವ ಕಾರಣಕ್ಕೆ ಈ ಗ್ರಾಮಸ್ಥರನ್ನು ತೆರವುಗೊಳಿಸಲಾಗಿದೆ ಎಂಬುದನ್ನು ಭಾರತೀಯ ಸೇನೆ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.

ಯುದ್ಧಕ್ಕೆ ಸನ್ನದ್ಧವಾಗಿರಲು ಸೇನೆಯು ಯುದ್ಧ ಸ್ಥಳದ ಸಮೀಪದ ಜನವಸತಿ ಪ್ರದೇಶಗಳನ್ನು ತೆರವುಗೊಳಿಸುವುದು ಸಾಮಾನ್ಯ. ಪ್ರದೇಶದಲ್ಲಿ ಹೆಚ್ಚು ಸೈನಿಕರು ಬರಲು ಅನುಕೂಲವಾಗಲೆಂದು ಮತ್ತು ಯುದ್ಧದ ವೇಳೆ ನಾಗರಿಕರಿಗೆ ಹಾನಿಯಾಗದಿರಲೆಂದು ಮುನ್ನೆಚ್ಚರಿಕೆಯಾಗಿ ಈ ಕ್ರಮ ಜರುಗಿಸಲಾಗುತ್ತದೆ. ಸದ್ಯ, ಸುಕ್ನಾದಿಂದ ಸಾವಿರಾರು ಭಾರತೀಯ ಸೈನಿಕರು ಡೋಕ್ಲಾಮ್'ನತ್ತ ಆಗಮಿಸುತ್ತಿದ್ದು, ಅವರಿಗೆ ಸ್ಥಳಾವಕಾಶ ಒದಗಿಸಲು ನಾತಂಗ್ ಗ್ರಾಮವನ್ನು ತೆರವುಗೊಳಿಸಲಾಗುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ.

ಆದರೆ, ಇದು ಪ್ರತೀ ವರ್ಷ ನಡೆಯುವ ಸಾಮಾನ್ಯ ಮಿಲಿಟರಿ ಕ್ರಿಯೆಯಾಗಿದೆ ಎಂದು ಕೆಲ ಮಿಲಿಟರಿ ಅಧಿಕಾರಿಗಳು ಹೇಳಿಕೆ ಉಲ್ಲೇಖಿಸಿ ವರದಿಗಳು ಬಂದಿವೆ. ಭಾರತೀಯ ಸೇನೆಯು ಪ್ರತೀ ವರ್ಷದ ಸೆಪ್ಟಂಬರ್'ನಲ್ಲಿ ಮಿಲಿಟರಿ ಕ್ರಿಯೆ ನಡೆಸುತ್ತದೆ. ಆಗೆಲ್ಲಾ ಗ್ರಾಮಗಳನ್ನು ತೆರವುಗೊಳಿಸಲಾಗುತ್ತದೆ. ಈ ವರ್ಷ ತುಸು ಮುಂಚೆಯೇ ಈ ಕ್ರಿಯೆ ಮಾಡಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿಗಳು ಹೇಳಿದ್ದಾರೆಂದು ನ್ಯೂಸ್18 ವರದಿ ಮಾಡಿದೆ.

ಇನ್ನೊಂದೆಡೆ, ಚೀನಾದ ಸರಕಾರೀ ಮಾಧ್ಯಮಗಳು ತಮ್ಮ ಯುದ್ಧೋನ್ಮಾದವನ್ನು ಮುಂದುವರಿಸಿವೆ. ಭಾರತ ಮತ್ತು ಚೀನಾ ಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಸಲು ಭಾರತದ ಮೇಲೆ ಚೀನಾ ಯುದ್ಧ ಮಾಡುವುದು ಅಗತ್ಯ ಎಂಬಂತಹ ಹೇಳಿಕೆಗಳು ಚೀನಾದ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.