ಭಾರತದ 50 ನಗರಗಳಲ್ಲಿ ರಾಬಿನ್ ಹುಡ್ ಸೇನೆ ಅಸ್ತಿತ್ವ ಹೊಂದಿದೆ. ಒಂದೊಂದು ನಗರದಲ್ಲಿರುವ ರೆಸ್ಟೋರೆಂಟ್'ಗಳು, ಕೆಟರರ್'ಗಳೊಂದಿಗೆ ಇವು ನಿರಂತರ ಸಂಪರ್ಕ ಹೊಂದಿರುತ್ತವೆ. ಕೆಟರರ್'ಗಳು ಅಥವಾ ಅಡುಗೆ ಗುತ್ತಿಗೆದಾರರು ಕೆಲಸ ಮಾಡುವ ಪ್ರದೇಶಗಳ ವಿವರವನ್ನು ಮುಂಚಿತವಾಗಿಯೇ ತಿಳಿದುಕೊಂಡಿರುತ್ತವೆ. ಹೀಗಾಗಿ, ಸಮಾರಂಭ ಮುಕ್ತಾಯವಾದಾಗ ಅಲ್ಲಿಗೆ ಹೋಗಿ, ಮಿಕ್ಕಿರುವ ಆಹಾರವನ್ನು ಸಂಗ್ರಹಿಸುತ್ತವೆ.
ನವದೆಹಲಿ(ಸೆ. 17): ರಾಬಿನ್ ಹುಡ್ ಆರ್ಮಿ ಅಥವಾ ಆರ್'ಹೆಚ್'ಎ ಬಗ್ಗೆ ಕೇಳಿದ್ದೀರಾ..? ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆ ಇದು. ರಾಬಿನ್ ಹುಡ್ ಎಂಬ ಇತಿಹಾಸ ಪ್ರಸಿದ್ಧ ದರೋಡೆಕೋರನ ಹೆಸರು ಈ ಸಂಸ್ಥೆಗೆ ಇಟ್ಟಿರುವುದು ಅಚ್ಚರಿ ತರುತ್ತಿದೆಯಾ? ಶ್ರೀಮಂತರನ್ನು ದೋಚಿ ಬಡವರಿಗೆ ಸಂಪತ್ತು ಹಂಚುತ್ತಿದ್ದವ ರಾಬಿನ್ ಹುಡ್. ಅಂತೆಯೇ, ರಾಬಿನ್ ಹುಡ್ ಆರ್ಮಿ ಕೂಡ ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತದೆ. ಆದರೆ, ಶ್ರೀಮಂತರನ್ನು ದೋಚುವುದಿಲ್ಲ. ಬದಲಾಗಿ ಅವರಿಂದ ಬಳಸಿ ಮಿಕ್ಕ ಆಹಾರವನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತಿದೆ. ರೆಸ್ಟೋರೆಂಟ್'ಗಳಲ್ಲಿ, ಸಮಾರಂಭಗಳಲ್ಲಿ ಅದೆಷ್ಟೋ ಆಹಾರಗಳು ಮಿಕ್ಕು ಕಸದ ಪಾಲಾಗುತ್ತಿರುವುದು ನಮ್ಮ ಬಹುತೇಕರ ಗಮನಕ್ಕೆ ಬಂದೇ ಇರುವುದಿಲ್ಲ. ಈ ಮಿಕ್ಕ ಆಹಾರವನ್ನು ಸರಿಯಾಗಿ ಹಂಚಿದರೆ ಬಹುತೇಕ ನಿರ್ಗತಿಕ ಬಡವರ ಹೊಟ್ಟೆ ತುಂಬಿಸಬಹುದೆಂಬ ಅಂದಾಜಿದೆ. ರಾಬಿನ್ ಹುಡ್ ಆರ್ಮಿ ಈ ಹಂಚುವ ಕಾಯಕ ಮಾಡುತ್ತಿದೆ. ಈ ಸೇನೆಯಲ್ಲಿ ಕೈಜೋಡಿಸುವವರೆಲ್ಲರೂ ಯಾವುದೇ ಸ್ವಾರ್ಥದ ಪ್ರತಿಫಲಾಪೇಕ್ಷೆ ಹೊಂದಿಲ್ಲದವರಾಗಿದ್ದಾರೆ. ಈ ಆರ್ಮಿಯ ಬಹುತೇಕ ಸದಸ್ಯರು ಯುವ ಜನಾಂಗವೇ. ಹಸಿರು ಬಣ್ಣದ ಯೂನಿಫಾರ್ಮ್ ತೊಡುವ ಈ ಸೇನಾ ಸದಸ್ಯರು ಖುದ್ದಾಗಿ ಹೋಗಿ ಆಹಾರವನ್ನು ಸಂಗ್ರಹಿಸಿ ಬಡವರ ಕೇರಿಗೆ ಹೋಗಿ ತಲುಪಿಸುತ್ತಾರೆ.
ಭಾರತದ 50 ನಗರಗಳಲ್ಲಿ ರಾಬಿನ್ ಹುಡ್ ಸೇನೆ ಅಸ್ತಿತ್ವ ಹೊಂದಿದೆ. ಒಂದೊಂದು ನಗರದಲ್ಲಿರುವ ರೆಸ್ಟೋರೆಂಟ್'ಗಳು, ಕೆಟರರ್'ಗಳೊಂದಿಗೆ ಇವು ನಿರಂತರ ಸಂಪರ್ಕ ಹೊಂದಿರುತ್ತವೆ. ಕೆಟರರ್'ಗಳು ಅಥವಾ ಅಡುಗೆ ಗುತ್ತಿಗೆದಾರರು ಕೆಲಸ ಮಾಡುವ ಪ್ರದೇಶಗಳ ವಿವರವನ್ನು ಮುಂಚಿತವಾಗಿಯೇ ತಿಳಿದುಕೊಂಡಿರುತ್ತವೆ. ಹೀಗಾಗಿ, ಸಮಾರಂಭ ಮುಕ್ತಾಯವಾದಾಗ ಅಲ್ಲಿಗೆ ಹೋಗಿ, ಮಿಕ್ಕಿರುವ ಆಹಾರವನ್ನು ಸಂಗ್ರಹಿಸುತ್ತವೆ.
ಪಾಕಿಸ್ತಾನದಲ್ಲೂ ರಾಬಿನ್ ಹುಡ್ ಆರ್ಮಿ ಅಸ್ತಿತ್ವದಲ್ಲಿದೆ. ಅಲ್ಲಿ 6 ನಗರಗಳಲ್ಲಿ ಆರ್ಮಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಮೊದಲಾದ ದೇಶಗಳಲ್ಲೂ ಇದು ಶುರುವಾಗಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ 70 ವರ್ಷಗಳ ಸ್ವಾತಂತ್ರ್ಯ ಸಂಭ್ರಮದ ದಿನದಂದು ಭಾರತ ಮತ್ತು ಪಾಕಿಸ್ತಾನದಲ್ಲಿ ರಾಬಿನ್ ಹುಡ್ ಆರ್ಮಿ ಸದಸ್ಯರು 13 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಹಂಚಿ ಗಮನ ಸೆಳೆದಿದ್ದರು.
ಪೋರ್ಚುಗಲ್ ಸ್ಫೂರ್ತಿ:
ಪೋರ್ಚುಗಲ್ ದೇಶದಲ್ಲಿ "ರೀಫುಡ್" ಎಂಬ ಸ್ವಯಂಸೇವಾ ಸಂಸ್ಥೆಯೊಂದು ರೆಸ್ಟೋರೆಂಟ್'ಗಳಿಂದ ಮಿಕ್ಕ ಆಹಾರವನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ಹಂಚುವ ಕೆಲಸ ಮಾಡುತ್ತಿತ್ತು. ಹಂಟರ್ ಹಾಲ್ಡರ್ ಎಂಬುವವರು ರೀಫುಡ್'ನ ಸಂಸ್ಥಾಪಕರು. ಭಾರತೀಯ ಮೂಲದ ನೀಲ್ ಘೋಷ್ ಎಂಬುವವರಿಗೆ ರೀಫುಡ್'ನ ಕಾನ್ಸೆಪ್ಟ್ ಇಷ್ಟವಾಗಿದೆ. ಕೂಡಲೇ ಅವರು ಹಂಟರ್ ಹಾಲ್ಡರ್ ಜೊತೆ ಮಾತನಾಡಿ ಯೋಜನೆಯ ವಿವರವನ್ನು ತಿಳಿದುಕೊಳ್ಳುತ್ತಾರೆ. ನೀಲ್ ಘೋಷ್, ಆನಂದ್ ಸಿನ್ಹ ಮತ್ತು ಆರುಷಿ ಬಾತ್ರ ಈ ಮೂವರು ಸೇರಿಕೊಂಡು 2014ರ ಆಗಸ್ಟ್'ನಲ್ಲಿ ರಾಬಿನ್ ಹುಡ್ ಆರ್ಮಿ ಸ್ಥಾಪಿಸುತ್ತಾರೆ. ಮೂರು ವರ್ಷದ ಕೂಸಾಗಿರುವ ಈ ಆರ್ಮಿಯಲ್ಲಿ ಸದ್ಯ 12 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ.
