ಭಾರತೀಯ ಬುದ್ಧಿಶಕ್ತಿಗೆ ಅಮೆರಿಕ ಮಣೆ ಹಾಕುವುದು ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಮೂಲದ ಹೆಣ್ಣು ಮಗಳಿಗೆ ಅಮೆರಿಕ ಮತ್ತೊಂದು ಅತ್ಯುನ್ನತ ಸ್ಥಾನ ನೀಡಿ ಗೌರವಿಸಿದೆ.

ವಾಷಿಂಗ್ಟನ್‌: ಅಮೆರಿಕದ ಇಂಧನ ಸಚಿವಾಲಯದ ಅಧೀನಕ್ಕೆ ಬರುವ ಮಹತ್ವದ ವಿಭಾಗವಾದ ಅಣುಶಕ್ತಿ ಇಂಧನ ವಿಭಾಗದ ಮುಖ್ಯಸ್ಥ ಹುದ್ದೆಗೆ ಭಾರತೀಯ ಮೂಲದ ರೀಟಾ ಬರಣ್‌ವಾಲ್‌ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಮನಿರ್ದೇಶನ ಮಾಡಿದ್ದಾರೆ.

ಅಮೆರಿಕ ಸಂಸತ್ತಿನ ಸದನವಾದ ಸೆನೆಟ್‌, ರೀಟಾ ಅವರ ನಾಮನಿರ್ದೇಶನವನ್ನು ಒಪ್ಪಿದರೆ ನೇಮಕ ಅಧಿಕೃತಗೊಳ್ಳಲಿದೆ. ಅಮೆರಿಕದ ಅಣು ತಂತ್ರಜ್ಞಾನ, ಸಂಶೋಧನೆ, ಅಭಿವೃದ್ಧಿ ಹಾಗೂ ಅಣು ಮೂಲಸೌಕರ್ಯದ ನಿರ್ವಹಣೆಯ ಜವಾಬ್ದಾರಿಯು ಅಣುಶಕ್ತಿ ಇಂಧನ ವಿಭಾಗಕ್ಕೆ ಸೇರಿದ್ದಾಗಿದೆ.

ನೇಮಕವು ಅಂತಿಮವಾದರೆ ಇಂಥ ಮಹತ್ವದ ವಿಭಾಗಕ್ಕೆ ರೀಟಾ ಬರಣ್‌ವಾಲ್‌ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದು, ಇದು ಮುಖ್ಯಸ್ಥರ ಹುದ್ದೆಯಾಗಿದೆ. ಬರಣ್‌ವಾಲ್‌ ಅವರು ಸೃಜನಶೀಲ ಪರಮಾಣು ಕಾರ್ಯಕ್ರಮ ಸಂಸ್ಥೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ವಿವಿಧ ಪರಮಾಣು ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.