ಪೋಖ್ರಾನ್‌[ಫೆ.17]: ಜಮ್ಮು-ಕಾಶ್ಮೀರದ ಪುಲ್ವಾಮಾ ಸ್ಫೋಟ ವಿಧ್ವಂಸಕ ಘಟನೆ ಬೆನ್ನಲ್ಲೇ, ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಭಾರತೀಯ ವಾಯುಪಡೆಯು ಭಾರೀ ಪ್ರಮಾಣದ ಸೇನಾ ತರಬೇತಿ ಕಾರ್ಯಾಚರಣೆಯನ್ನು ನಡೆಸಿತು.

ರಾಜಸ್ಥಾನದ ಫೋಖ್ರಾನ್‌ನಲ್ಲಿ ನಡೆದ ಭಾರತೀಯ ವಾಯುಪಡೆಯ ಈ ಸೇನಾ ತರಬೇತಿ ಕಾರ್ಯಾಚರಣೆಯಲ್ಲಿ 140 ಫೈಟರ್‌ ಜೆಟ್‌ಗಳು, ದಾಳಿ ಮಾಡುವ ಸಾಮರ್ಥ್ಯ ಹೊಂದಿದ ಹೆಲಿಕಾಪ್ಟರ್‌ಗಳು ಭಾಗವಹಿಸಿದ್ದವು. ಆದರೆ ಇದು ಪೂರ್ವನಿಯೋಜಿತ ಕಾರ್ಯಕ್ರಮವಾಗಿತ್ತು ಎಂದು ವಾಯುಪಡೆ ಮೂಲಗಳು ಹೇಳಿವೆ.

ಇನ್ನು ಹಗಲು ರಾತ್ರಿಯ ‘ವಾಯು ಶಕ್ತಿ’ ತಾಲೀಮು ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಅವರು, ‘ಭಾರತೀಯ ರಾಜಕೀಯ ನಾಯಕತ್ವ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧವಾಗುತ್ತಿದ್ದೇವೆ,’ ಎಂದು ಹೇಳಿದರು. ಆದಾಗ್ಯೂ, ಅವರು ಪುಲ್ವಾಮಾ ಉಗ್ರ ದಾಳಿ ಬಗ್ಗೆಯಾಗಲೀ ಅಥವಾ ಪಾಕಿಸ್ತಾನ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಲಿಲ್ಲ.

ದೇಶದ ಭದ್ರತಾ ಸವಾಲುಗಳನ್ನು ಎದುರಿಸುವ ಮೂಲಕ ದೇಶದ ಸಾರ್ವಭೌಮತ್ವ ಕಾಪಾಡಲು ವಾಯುಪಡೆ ಸರ್ವಸನ್ನದ್ಧವಾಗಿದೆ ಎಂಬುದನ್ನು ತಿಳಿಸಲು ಇಚ್ಛಿಸುತ್ತೇನೆ ಎಂದರು.

ಪುಲ್ವಾಮಾ ದಾಳಿ ವಿರುದ್ಧ ಯಾವುದೇ ರೀತಿಯ ಪ್ರತೀಕಾರ ಕೈಗೊಳ್ಳಲು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿ ರಾಷ್ಟ್ರವನ್ನಾಗಿ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದರು.