ಭಾರತದ ಆರ್ಥಿಕತೆಗೆ ಬಡತನ ಎನ್ನುವುದು ಕಪ್ಪುಚುಕ್ಕೆ ಇದ್ದಂತೆ. ಸ್ವಾತಂತ್ರ್ಯಾನಂತರ ಸುಮಾರು 3 ದಶಕಗಳವರೆಗೆ ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಬಡವರಿರುವ ಸ್ಥಳವಾಗಿತ್ತು. 1990ರ ಆರಂಭದಲ್ಲಿ ದೇಶವು ಅಲ್ಪ ಮಟ್ಟಿಗೆ ಚೇತರಿಸಿಕೊಂಡಿತು.

ಅದಕ್ಕಿಂತ ಸಂತಸದ ವಿಷಯ ಎಂದರೆ, ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಮುಂದಿನ 5 ವರ್ಷಗಳಲ್ಲಿ ಭಾರತ ಕಡು ಬಡ ರಾಷ್ಟ್ರ ಎಂಬ ಕುಖ್ಯಾತಿಯಿಂದ ಮುಕ್ತಿ ಪಡೆಯುತ್ತದೆ. ಇನ್ನು 10 ವರ್ಷದಲ್ಲಿ ಭಾರತ ಬಹುತೇಕ ಬಡತನಮುಕ್ತ ರಾಷ್ಟ್ರವಾಗುತ್ತದೆ.

ನಿಮಿಷಕ್ಕೆ 44 ಜನರು ಮೇಲಕ್ಕೆ!

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಕಡು ಬಡವರ ಸಂಖ್ಯೆ ನಿಮಿಷಕ್ಕೆ 44 ಕಡಿಮೆಯಾಗುತ್ತಿದೆ. ಅಂದರೆ ಪ್ರತಿ ನಿಮಿಷಕ್ಕೆ 44 ಜನರು ಕಡು ಬಡತನದಿಂದ ಹೊರಗೆ ಬರುತ್ತಿದ್ದಾರೆ. ಕಡು ಬಡತನದಿಂದ ಶೀಘ್ರವಾಗಿ ಹೊರಬರುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

2018ರ ಮೇನಲ್ಲಿ ಭಾರತದಲ್ಲಿ 7.3 ಕೋಟಿ ಕಡು ಬಡವರಿದ್ದರೆ, ನೈಜೀರಿಯಾದಲ್ಲಿ 8.7 ಕೋಟಿ ಜನರು ಕಡು ಬಡತನದಲ್ಲಿದ್ದರು. ಅಲ್ಲಿ ಪ್ರತಿ ನಿಮಿಷಕ್ಕೆ 6 ಜನರು ಕಡು ಬಡವರಾಗುತ್ತಿದ್ದಾರೆ. ಭಾರತದಲ್ಲಿನ ಟ್ರೆಂಡ್‌ ವ್ಯತಿರಿಕ್ತವಾಗಿದೆ. ಹಾಗಾಗಿ 2018ರಲ್ಲಿ ನೈಜೀರಿಯಾ ಕಡುಬಡವರು ಹೆಚ್ಚಿರುವ ರಾಷ್ಟ್ರ ಎಂಬ ಕುಖ್ಯಾತಿಗೆ ಒಳಗಾಗಿದೆ.

2030 ರಲ್ಲಿ ಭಾರತದಲ್ಲಿ ಕಡುಬಡವರೇ ಇರೋದಿಲ್ಲ?

ಇದೇ ಟ್ರೆಂಡ್‌ ಮುಂದುವರೆದರೆ ಭಾರತ ಕಡು ಬಡ ರಾಷ್ಟ್ರಗಳ ಪಟ್ಟಿಯಲ್ಲಿ ಶೀಘ್ರವೇ 3ನೇ ಸ್ಥಾನ ಪಡೆಯಲಿದೆ. ಕಾಂಗೋ 2ನೇ ಸ್ಥಾನಕ್ಕೆ ಹೋಗಲಿದೆ. ಈ ಕುರಿತ ಸಮೀಕ್ಷೆಯನ್ನು ಬ್ರೂಕಿಂಗ್ಸ್‌ ಬ್ಲಾಗ್‌ ಪ್ರಕಟಿಸಿದ್ದು, ಅದರ ಪ್ರಕಾರ 2022ರ ವೇಳೆಗೆ ಭಾರತದಲ್ಲಿ ಶೇ.3ಕ್ಕಿಂತ ಕಡಿಮೆ ಜನರು ಕಡು ಬಡವರಾಗಿರುತ್ತಾರೆ. 2030ರ ವೇಳೆಗೆ ಭಾರತದಲ್ಲಿ ಕಡು ಬಡವರೇ ಇರುವುದಿಲ್ಲ.

ಕಡು ಬಡತನ ಬೇರೆ, ಬಿಪಿಎಲ್‌ ಮಟ್ಟ ಬೇರೆ

ವಿಶ್ವಬ್ಯಾಂಕ್‌ನ ಮಾನದಂಡಗಳ ಪ್ರಕಾರ ಕಡು ಬಡವರು ಅಂದರೆ ಒಬ್ಬರು ಒಂದು ದಿನಕ್ಕೆ 1.9 ಡಾಲರ್‌ (ಸುಮಾರು 130 ರು.)ಗಿಂತ ಕಡಿಮೆ ವೆಚ್ಚದಲ್ಲಿ ಬದುಕುವವರು. ಭಾರತದಲ್ಲಿ ಸದ್ಯ ಇವರ ಸಂಖ್ಯೆ ಶೇ.12.4 ಇದೆ. ಇದೇ ಮಾನದಂಡವನ್ನು ಬ್ರೂಕಿಂಗ್ಸ್‌ ಸಮೀಕ್ಷೆಗೆ ಬಳಸಲಾಗಿದೆ.

ಆದರೆ, ಭಾರತದಲ್ಲಿ ಬಡತನವನ್ನು ಹೇಳಲು ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗೆ) ಮತ್ತು ಎಪಿಎಲ್‌ (ಬಡತನ ರೇಖೆಗಿಂತ ಮೇಲೆ) ಮಾನದಂಡ ಬಳಸಲಾಗುತ್ತದೆ. ವರ್ಷಕ್ಕೆ 27000 ರು.ಗಿಂತ ಕಡಿಮೆ ಗಳಿಸುವ ಕುಟುಂಬ ಬಿಪಿಎಲ್‌ ಕುಟುಂಬ. 2012ರಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.22ರಷ್ಟಿತ್ತು.