ಕೊಲಂಬೋ[ಏ.24]: ಶ್ರೀಲಂಕಾದಲ್ಲಿ ಉಗ್ರರು ಭೀಕರ ದಾಳಿಗೆ ಯೋಜಿಸಿದ್ದಾರೆ ಎಂಬ ಭಾರತದ ಗುಪ್ತಚರ ನೀಡಿದ ಮಾಹಿತಿಯನ್ನು ನಿರ್ಲಕ್ಷ್ಯ ಮಾಡದೇ ಇದ್ದಿದ್ದರೆ ಈ ದಾಳಿಯನ್ನು ತಡೆಯಬಹುದಿತ್ತು ಎಂಬ ರೀತಿಯಲ್ಲಿ ಶ್ರೀಲಂಕಾ ಸರ್ಕಾರ ಪಶ್ಚಾತ್ತಾಪದ ಮಾತುಗಳನ್ನಾಡಿದೆ.

ಉಗ್ರರು ಭಾರೀ ಕೃತ್ಯಕ್ಕೆ ಯೋಜನೆ ರೂಪಿಸಿರಬಹುದಾದ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರವಾಗಿರುವಂತೆ ಭಾರತದ ಗುಪ್ತಚರ ಮಾಹಿತಿಯನ್ನು ನಿರ್ಲಕ್ಷ್ಯ ಮಾಡಿದ್ದರಿಂದಲೇ ಈ ದುರಂತಕ್ಕೆ ಒಳಗಾಗಬೇಕಾಯಿತು. ಹೀಗಾಗಿ, ತಮ್ಮ ನಿರ್ಲಕ್ಷ್ಯಕ್ಕಾಗಿ ಕ್ಷಮೆ ಕೋರುವುದಾಗಿ ಶ್ರೀಲಂಕಾ ಸರ್ಕಾರ ಹೇಳಿಕೊಂಡಿದೆ.

ಈ ಬಗ್ಗೆ ಮಂಗಳವಾರ ಮಾತನಾಡಿದ ಶ್ರೀಲಂಕಾ ಸರ್ಕಾರದ ವಕ್ತಾರ ಹಾಗೂ ಆರೋಗ್ಯ ಸಚಿವರೂ ಆಗಿರುವ ರಜಿತಾ ಸೇನರತ್ನೆ ಅವರು, ‘ಶ್ರೀಲಂಕಾದಲ್ಲಿ ಸರಣಿ ಬಾಂಬ್‌ ಸ್ಫೋಟ ಘಟನೆಗಳು ನಡೆಯುತ್ತವೆ ಎಂಬ ಮಾಹಿತಿಯನ್ನು ಭಾರತ ನೀಡಿತ್ತು. ಈ ಎಚ್ಚರಿಕೆಯನ್ನು ನಾವು ಗಮನಿಸಿದ್ದೆವು. ಆದರೂ ನಿರ್ಲಕ್ಷ್ಯ ವಹಿಸಿದೆವು. ಹೀಗಾಗಿ, ಈ ಘಟನೆಯಲ್ಲಿ ಮಡಿದವರ ಕುಟುಂಬ ಮತ್ತು ಬಾಂಬ್‌ ದಾಳಿಗೆ ತುತ್ತಾಗಿರುವ ಸಂಸ್ಥೆಗಳ ಕ್ಷಣೆ ಕೋರುತ್ತೇವೆ,’ ಎಂದು ತಿಳಿಸಿದರು. ಅಲ್ಲದೆ, ಈ ಘಟನೆಯಲ್ಲಿ ಸಿಲುಕಿಕೊಂಡ ಎಲ್ಲ ಕುಟುಂಬಗಳಿಗೂ ಪರಿಹಾರ ನೀಡುತ್ತೇವೆ. ದಾಳಿಯಿಂದ ಧ್ವಂಸವಾಗಿರುವ ಚಚ್‌ರ್‍ ಅನ್ನು ಮತ್ತೆ ನಿರ್ಮಿಸುತ್ತೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಭಾರತೀಯ ದೂತಾವಾಸ ಮತ್ತು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಘಟನೆಗೆ 10 ದಿನ ಮೊದಲೇ ಭಾರತದ ಗುಪ್ತಚರ ಸಂಸ್ಥೆಗಳು ಲಂಕಾ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿದ್ದವು.