ನವದೆಹಲಿ(ಆ.08): ತನ್ನ ರಾಯಭಾರಿಯನ್ನು ವಾಪಸ್ ಕಳುಹಿಸಿರುವ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ರದ್ದುಗೊಳಿಸಿರುವ ಪಾಕಿಸ್ತಾನದ ನಡೆಗೆ ಭಾರತ ತೀಕ್ಷ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ನಿರ್ಧಾರವನ್ನು ಎಚ್ಚರಿಕೆಯ ಕರೆಗಂಟೆ ಎಂದು ಭಾವಿಸುವಂತೆ ಭಾರತ ವಿಶ್ವ ಸಮುದಾಯಕ್ಕೆ ಮನವಿ ಮಾಡಿದೆ.

ತನ್ನೊಂದಿಗೆ ಎಲ್ಲ ನಂಟು ಕಡಿದುಕೊಂಡಿರುವ ಪಾಕಿಸ್ತಾನ, ದಕ್ಷಿಣ ಏಷ್ಯಾದಲ್ಲಿ ರಾಜಕೀಯ ಪ್ರಕ್ಷುಬ್ದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ. ಪಾಕಿಸ್ತಾನದ ಈ ನಡೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಭಾರತ ಅಸಮಾಧಾನ ಹೊರ ಹಾಕಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ತನ್ನ ಆಂತರಿಕ ವಿಚಾರ ಎಂದಿರುವ ಭಾರತ, ಇದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಶಾಂತಿ ಸ್ಥಾಪನಯ ತನ್ನೆಲ್ಲಾ ಪ್ರಯತ್ನಗಳಿಗೆ ತಡೆಯೊಡ್ಡಿದೆ ಎಂಧು ಭಾರತ ಆಕ್ರೋಶ ಹೊರಹಾಕಿದೆ.

ಇಷ್ಟೇ ಅಲ್ಲದೇ ಕಾಶ್ಮೀರ ಕುರಿತಾದ ತನ್ನ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಲು ಪಾಕಿಸ್ತಾನ ನಿರ್ಧರಿಸಿರುವುದು ಅದರ ಮೂರ್ಖತನವನ್ನು ಪ್ರದರ್ಶಿಸುತ್ತದೆ ಎಂದು ಭಾರತ ವ್ಯಂಗ್ಯವಾಡಿದೆ. ಪಾಕಿಸ್ತಾನದ ನಿರ್ಧಾರವನ್ನು ಎಚ್ಚರಿಕೆಯ ಕರೆಗಂಟೆ ಎಂದು ಭಾವಿಸುವಂತೆ ವಿಶ್ವ ಸಮುದಾಯಕ್ಕೆ ಮನವಿ ಮಾಡಿರುವ ಭಾರತ, ಭವಿಷ್ಯದ ತನ್ನ ನಿರ್ಣಯಗಳನ್ನು ಬೆಂಬಲಿಸುವಂತೆ ಮನವಿ ಮಾಡಿದೆ.