ಪಾಕಿಸ್ತಾನದ ವರ್ತನೆಯು ಸಹನೆಯ ಮಿತಿಯನ್ನು ಮೀರಿಬಿಟ್ಟಿದೆ. ಇನ್ನು ಮುಂದೆ ಭಾರತ-ಪಾಕಿಸ್ತಾನದ ಸಂಬಂಧವು ಹಿಂದಿನಂತಿರುವುದಿಲ್ಲ. ಪಾಕಿಸ್ತಾನವು ತನ್ನ ಪಾತ್ರ ಇಲ್ಲ ಎಂದು ಎಷ್ಟೇ ಹೇಳಿದರೂ, ಅದರ ಕೈವಾಡವಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳು ನಮ್ಮಲ್ಲಿವೆ,’’

ನವದೆಹಲಿ/ಉರಿ(ಸೆ.20): ಜಮ್ಮು-ಕಾಶ್ಮೀರದ ಉರಿ ವಲಯದಲ್ಲಿ ಭಾನುವಾರ ನಡೆದ ಉಗ್ರರ ದಾಳಿಗೆ ಅತ್ಯಂತ ತೀಕ್ಷ್ಣ ಹಾಗೂ ಪ್ರಬಲವಾದ ಉತ್ತರ ನೀಡಲು ಭಾರತ ಸರ್ಕಾರ ಮುಂದಾಗಿದೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂಬಂತೆ ಬಿಂಬಿಸಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆ ದೇಶವನ್ನು ರಾಜತಾಂತ್ರಿಕವಾಗಿ ಏಕಾಂಗಿಯನ್ನಾಗಿಸುವ ಹಾಗೂ ಅದರೊಂದಿಗಿನ ಎಲ್ಲ ಆರ್ಥಿಕ, ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಉರಿ ಸೇನಾನೆಲೆ ಮೇಲಿನ ದಾಳಿಯ ಬೆನ್ನಲ್ಲೇ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಇದೇ ವೇಳೆ, ದಾಳಿ ವೇಳೆ ಗಾಯಗೊಂಡಿದ್ದ ಮತ್ತೊಬ್ಬ ಯೋಧ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದು, ಹುತಾತ್ಮರಾದವರ ಸಂಖ್ಯೆ 18ಕ್ಕೇರಿದೆ. ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, ಸೇನೆಯ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಸೇನಾನೆಲೆಯಲ್ಲಿ ಹುತಾತ್ಮರಾದ 17 ಮಂದಿ ಯೋಧರಿಗೆ ಸೋಮವಾರ ಅಂತಿಮ ನಮನ ಸಲ್ಲಿಸಿದ್ದಾರೆ. ಜತೆಗೆ, ಪಾರ್ಥಿವ ಶರೀರಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸುವ ಕಾರ್ಯವೂ ತ್ವರಿತಗತಿಯಲ್ಲಿ ಸಾಗಿದೆ.

ಪಾಕ್‌ಗೆ ತಕ್ಕ ಪ್ರತ್ಯುತ್ತರ: ಭಾನುವಾರದ ದಾಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬ ಕುರಿತು ನಿರ್ಧರಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಸೋಮವಾರ ಸಭೆ ಕರೆಯಲಾಗಿತ್ತು. ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ್ ಪರಿಕರ್ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜತಾಂತ್ರಿಕವಾಗಿ ಪಾಕ್ ಅನ್ನು ಪ್ರತ್ಯೇಕವಾಗಿಡುವುದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಏಕಾಂಗಿಯಾಗಿಸುವುದು, ಎಲ್ಲ ಆರ್ಥಿಕ ಸಂಬಂಧಗಳನ್ನು ಕಡಿದುಕೊಳ್ಳುವುದು ಹಾಗೂ ಕದನವಿರಾಮ ಉಲ್ಲಂಘನೆ, ನುಸುಳುವಿಕೆಗೆ ಪ್ರತಿಯಾಗಿ ಪಾಕ್ ಶಿಬಿರಗಳ ಮೇಲೆ ದಾಳಿ ನಡೆಸುವುದು ಸೇರಿದಂತೆ ಅನೇಕ ಕ್ರಿಯಾಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಪಾಕ್‌ಗೆ ದಾಳಿ ಮೂಲಕ ಪ್ರತ್ಯುತ್ತರ ನೀಡುವ ಸಮಯ ಮತ್ತು ಸ್ಥಳದ ಆಯ್ಕೆಯು ನಮಗೆ ಬಿಟ್ಟಿದ್ದು ಎಂದೂ ಸರ್ಕಾರದ ಉನ್ನತ ಮೂಲಗಳು ಹೇಳಿವೆ. ಆದರೆ, ಯಾವುದೇ ಕಾರಣಕ್ಕೂ ಏಕಾಏಕಿ ನಿರ್ಧಾರ ಕೈಗೊಳ್ಳುವುದಿಲ್ಲ. ಸರಿಯಾದ ಯೋಜನೆ, ಸಮನ್ವಯತೆ ಸಾಧಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಿನ ಹೆಜ್ಜೆ ಇಡಲಾಗುವುದು ಎಂದಿದೆ.

ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘‘ಪಾಕಿಸ್ತಾನದ ವರ್ತನೆಯು ಸಹನೆಯ ಮಿತಿಯನ್ನು ಮೀರಿಬಿಟ್ಟಿದೆ. ಇನ್ನು ಮುಂದೆ ಭಾರತ-ಪಾಕಿಸ್ತಾನದ ಸಂಬಂಧವು ಹಿಂದಿನಂತಿರುವುದಿಲ್ಲ. ಪಾಕಿಸ್ತಾನವು ತನ್ನ ಪಾತ್ರ ಇಲ್ಲ ಎಂದು ಎಷ್ಟೇ ಹೇಳಿದರೂ, ಅದರ ಕೈವಾಡವಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳು ನಮ್ಮಲ್ಲಿವೆ,’’ ಎಂದು ಹೇಳಿದ್ದಾರೆ. ಸಭೆಯ ನಂತರ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಿ, ದಾಳಿಯ ಕುರಿತು ವಿವರಣೆ ನೀಡಿದ್ದಾರೆ.

ಕೇಂದ್ರದ ಕ್ರಿಯಾಯೋಜನೆಗಳೇನು?

1. ಪಾಕಿಸ್ತಾನವನ್ನು ಭಯೋತ್ಪಾದನಾ ಆಯೋಜಕ ರಾಷ್ಟ್ರ ಎಂದು ಘೋಷಿಸುವುದು

2. ಪಾಕ್‌ನೊಂದಿಗಿನ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವುದು

3. ಆ ದೇಶದೊಂದಿಗಿನ ಆರ್ಥಿಕ ಒಪ್ಪಂದಗಳನ್ನು ಕೈಬಿಡುವುದು

4. ನುಸುಳುವಿಕೆ ಮತ್ತು ಕದನವಿರಾಮ ಉಲ್ಲಂಘನೆಗಾಗಿ ಪಾಕ್‌ಗೆ ತಕ್ಕ ಶಿಕ್ಷೆ ನೀಡುವುದು

5. ಎಲ್‌ಒಸಿಯಾಚೆಗಿನ ಪಾಕಿಸ್ತಾನಿ ಶಿಬಿರಗಳ ಮೇಲೆ ದಾಳಿ ಸಾಧ್ಯತೆ(ತಕ್ಷಣಕ್ಕೆ ಅಲ್ಲ)