೧೮ ತಿಂಗಳಿಗೆ ₹ ೧೦ ಕೋಟಿ ಹೂಡಿಕೆ ಮಾಡುವ ಅಥವಾ ಮೂರು ವರ್ಷಕ್ಕೂ ಅಧಿಕ ₹ ೨೫ ಕೋಟಿ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ ೧೦ ವರ್ಷಗಳ ವಾಸದ ಅನುಮತಿ ನೀಡಲಾಗುತ್ತದೆ. ಇನ್ನೂ ಹತ್ತು ವರ್ಷಗಳ ಕಾಲ ಈ ಅನುಮತಿಯನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ..
ನವದೆಹಲಿ: ಸಿಂಗಾಪುರ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಭಾರತ, ದೇಶದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಗರಿಷ್ಠ ೨೦ ವರ್ಷಗಳ ವರೆಗಿನ ವಾಸದ ಅನುಮತಿ ನೀಡಲಿದೆ. ಹೆಚ್ಚಿನ ಸಂಖ್ಯೆಯ ಸಾಗರೋತ್ತರ ಹೂಡಿಕೆದಾರರನ್ನು ಸೆಳೆಯುವ ಸಲುವಾಗಿ ಹೊಸ ನಿಯಮವೊಂದನ್ನು ರೂಪಿಸಲು ಚಿಂತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ. ೧೮ ತಿಂಗಳಿಗೆ ₹ ೧೦ ಕೋಟಿ ಹೂಡಿಕೆ ಮಾಡುವ ಅಥವಾ ಮೂರು ವರ್ಷಕ್ಕೂ ಅಧಿಕ ₹ ೨೫ ಕೋಟಿ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ ೧೦ ವರ್ಷಗಳ ವಾಸದ ಅನುಮತಿ ನೀಡಲಾಗುತ್ತದೆ. ಇನ್ನೂ ಹತ್ತು ವರ್ಷಗಳ ಕಾಲ ಈ ಅನುಮತಿಯನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ.
ಹೂಡಿಕೆದಾರರಿಗೆ ಒಂದು ವಸತಿ ಆಸ್ತಿ ಖರೀದಿಸಲು ಅವಕಾಶವಿದೆ. ಹೂಡಿಕೆದಾರರ ಪತ್ನಿ ಅಥವಾ ಪತಿ ಮತ್ತು ಮಕ್ಕಳಿಗೆ ಇಲ್ಲಿ ಕೆಲಸ ಮಾಡಲು ಅಥವಾ ಶಿಕ್ಷಣ ಪಡೆಯಲು ಅವಕಾಶವಿದೆ. ಆದರೆ ಈ ಸೌಲಭ್ಯಗಳು ಪಾಕಿಸ್ತಾನ ಮತ್ತು ಚೀನಾದ ಹೂಡಿಕೆದಾರರಿಗೆ ಅನ್ವಯವಾಗುವುದಿಲ್ಲ. ಈ ಎಲ್ಲ ಸೌಲಭ್ಯಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಭೆಯ ಬಳಿಕ ಮಾತನಾಡುತ್ತಾ ತಿಳಿಸಿದ್ದಾರೆ.
(ಕನ್ನಡಪ್ರಭ ವಾರ್ತೆ)
