ಇಸ್ಲಾಮಾಬಾದ್‌[ಮಾ.18]: ಪುಲ್ವಾಮಾ ಉಗ್ರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ದಾಳಿ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನಿ ಯುದ್ಧ ವಿಮಾನಗಳು ಭಾರತದ ಮೇಲೆ ದಂಡೆತ್ತಿ ಬಂದದ್ದು, ಅವನ್ನು ಅಟ್ಟಾಡಿಸಿಕೊಂಡು ಹೋಗಿ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಪಾಕಿಸ್ತಾನ ವಶವಾದ ಬಳಿಕ ಎರಡೂ ದೇಶಗಳ ನಡುವೆ ಯುದ್ಧಕ್ಕೆ ವೇದಿಕೆ ಸಜ್ಜಾಗಿತ್ತು ಎಂಬ ರೋಚಕ ಮಾಹಿತಿ ಬೆಳಕಿಗೆ ಬಂದಿದೆ.

ಅಭಿನಂದನ್‌ ಅವರನ್ನು ಸೆರೆ ಹಿಡಿದಿರುವ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿದ ಬೆನ್ನಲ್ಲೇ, 6 ಕ್ಷಿಪಣಿಗಳನ್ನು ಉಡಾಯಿಸಿ ದಾಳಿ ಮಾಡುತ್ತೇವೆ ಎಂದು ಭಾರತ ಅಬ್ಬರಿಸಿತ್ತು. ಅದಕ್ಕೆ 3 ಪಟ್ಟು ತಿರುಗೇಟು ನೀಡುತ್ತೇವೆ ಎಂದು ಪಾಕಿಸ್ತಾನ ಕೂಡ ಎಚ್ಚರಿಕೆ ನೀಡಿತ್ತು. ಅಣ್ವಸ್ತ್ರ ಹೊಂದಿರುವ ಎರಡು ದೇಶಗಳ ನಡುವಣ ಈ ಗುದ್ದಾಟ ಯುದ್ಧಕ್ಕೆ ನಾಂದಿ ಹಾಡಬಹುದು ಎಂದು ಆತಂಕಕ್ಕೆ ಒಳಗಾದ ಅಮೆರಿಕ, ಕೂಡಲೇ ಸಂಧಾನಕ್ಕೆ ಇಳಿಯಿತು. ಅದರ ಫಲವಾಗಿ ಅಭಿನಂದನ್‌ ಅವರನ್ನು ವಶಕ್ಕೆ ಪಡೆದ ಎರಡೇ ದಿನದಲ್ಲಿ ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಭಾರತ ಕ್ಷಿಪಣಿ ದಾಳಿ ಯೋಜನೆ ಕೈಬಿಟ್ಟಿತು ಎಂಬ ಕುತೂಹಲಕರ ಸಂಗತಿಯನ್ನು ರಾಯಿಟ​ರ್‍ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಾಕ್‌ಗೆ ದೋವಲ್‌ ಫೋನ್‌:

ಫೆ.27ರಂದು ಅಭಿನಂದನ್‌ ವರ್ತಮಾನ್‌ ಅವರು ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದರು. ಅದೇ ದಿನ ಸಂಜೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಆಸೀಮ್‌ ಮುನೀರ್‌ಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಫೋನಾಯಿಸಿದರು. ಭಯೋತ್ಪಾದಕರ ವಿರುದ್ಧ ಭಾರತ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲುವುದಿಲ್ಲ. ನಮ್ಮ ಪೈಲಟ್‌ ಅನ್ನು ವಶಕ್ಕೆ ಪಡೆದಿದ್ದರೂ ನಾವು ಸುಮ್ಮನಿರುವುದಿಲ್ಲ ಎಂದು ನೇರವಾಗಿಯೇ ಹೇಳಿದರು ಎಂದು ಕೇಂದ್ರ ಸರ್ಕಾರದ ಮೂಲ ಹಾಗೂ ಈ ಬೆಳವಣಿಗೆಯ ಮಾಹಿತಿ ಇರುವ ಪಾಶ್ಚಾತ್ಯ ರಾಷ್ಟ್ರದ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ಇದೇ ವೇಳೆ, ಪಾಕಿಸ್ತಾನದ ಕೆಲವೊಂದು ತಾಣಗಳ ಮೇಲೆ ಒಟ್ಟು 6 ಕ್ಷಿಪಣಿ ದಾಳಿ ಮಾಡುವುದಾಗಿ ಭಾರತ ಸ್ಪಷ್ಟವಾಗಿ ಎಚ್ಚರಿಕೆ ನೀಡಿತ್ತು. ಅದನ್ನು ದೋವಲ್‌ ನೀಡಿದ್ದರೋ ಅಥವಾ ಬೇರಾದರೂ ನೀಡಿದ್ದರೋ ಎಂಬುದು ತಿಳಿದುಬಂದಿಲ್ಲ. ಅಂತಹ ಬೆದರಿಕೆ ಬಂದಿದ್ದು ನಿಜ ಎಂದು ಪಾಕಿಸ್ತಾನದ ಮಂತ್ರಿಯೊಬ್ಬರು ಹಾಗೂ ವಿದೇಶಿ ರಾಯಭಾರಿಯೊಬ್ಬರು ಖಚಿತಪಡಿಸಿದ್ದಾರೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಆ ಬೆದರಿಕೆ ಬರುತ್ತಿದ್ದಂತೆ ತಿರುಗೇಟು ನೀಡಿದ್ದ ಪಾಕಿಸ್ತಾನ, ‘ನೀವು 1 ಕ್ಷಿಪಣಿ ದಾಳಿ ಮಾಡಿದರೆ ನಾವು 3 ಕ್ಷಿಪಣಿ ಹಾರಿಬಿಡುತ್ತೇವೆ. ನೀವು ಏನೇ ಮಾಡಿದರೂ ಅದಕ್ಕೆ ನಮ್ಮ ಪ್ರತಿಕ್ರಿಯೆ ಮೂರು ಪಟ್ಟಿನಷ್ಟಿರುತ್ತದೆ’ ಎಂದು ಬೆದರಿಕೆ ಹಾಕಿತ್ತು ಎಂದು ಪಾಕಿಸ್ತಾನದ ಮಂತ್ರಿ ದೃಢಪಡಿಸಿದ್ದಾರೆ. ಎರಡೂ ದೇಶಗಳ ನಡುವೆ ಈ ರೀತಿ ಕ್ಷಿಪಣಿ ದಾಳಿ ಬೆದರಿಕೆಗಳ ವಿನಿಮಯ ಯುದ್ಧದಲ್ಲಿ ಪರ್ಯವಸಾನವಾಗಬಹುದು ಎಂಬ ಭೀತಿ ಅಮೆರಿಕವನ್ನು ಕಾಡಿತು.

ಭಾರತ, ಪಾಕ್‌ ಜತೆ ಅಮೆರಿಕ ಸಂಪರ್ಕ:

ಆಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಜತೆ ಮಾತುಕತೆ ನಡೆಸಲು ವಿಯೆಟ್ನಾಂ ರಾಜಧಾನಿ ಹನೋಯ್‌ನಲ್ಲಿದ್ದರು. ಕೂಡಲೇ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಹಾಗೂ ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪಿಯೋ ಅವರು ಕಾರ್ಯಾಚರಣೆಗೆ ಇಳಿದರು. ದೋವಲ್‌, ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್‌, ಪಾಕಿಸ್ತಾನದ ವಿದೇಶ ಮಂತ್ರಿ ಶಾ ಮಹಮೂದ್‌ ಖುರೇಷಿ ಜತೆಗೆ ಮಾತುಕತೆ ನಡೆಸಿದರು. ಅಮೆರಿಕ ನೌಕಾಪಡೆ ಮುಖ್ಯಸ್ಥರು ಕೂಡ ಭಾರತೀಯ ನೌಕಾಪಡೆ ಮುಖ್ಯಸ್ಥರ ಜತೆ ಸಂಪರ್ಕ ಸಾಧಿಸಿದರು.

ಯುದ್ಧ ಸದೃಶ ಪರಿಸ್ಥಿತಿಯನ್ನು ಶಮನಗೊಳಿಸುವ ಉದ್ದೇಶದಿಂದ, ಪಾಕ್‌ ವಶದಲ್ಲಿದ್ದ ಅಮೆರಿಕ ಪೈಲಟ್‌ ಅನ್ನು ತಕ್ಷಣವೇ ಬಿಡುಗಡೆಗೊಳಿಸುವುದು, ಅದಕ್ಕೆ ಪ್ರತಿಯಾಗಿ ಕ್ಷಿಪಣಿ ದಾಳಿ ನಡೆಸದಿರುವ ಭರವಸೆಯನ್ನು ಭಾರತದಿಂದ ಪಡೆಯುವುದಕ್ಕೆ ಅಮೆರಿಕ ಒತ್ತು ನೀಡಿತು. ಅದು ಫಲ ನೀಡಿತು. ಹೀಗಾಗಿ ಫೆ.28ರಂದು ಬೆಳಗ್ಗೆ ಡೊನಾಲ್ಡ್‌ ಟ್ರಂಪ್‌ ಬಿಕ್ಕಟ್ಟು ಬೇಗ ಬಗೆಹರಿಯುತ್ತದೆ ಎಂದರು. ಅದೇ ದಿನ ಮಧ್ಯಾಹ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಅಭಿನಂದನ್‌ ಅವರನ್ನು ಬಿಡುಗಡೆ ಮಾಡುವ ಘೋಷಣೆ ಮಾಡಿದರು. ಮರುದಿನವೇ ಪೈಲಟ್‌ ಬಿಡುಗಡೆಯಾದರು ಎಂದು ಸುದ್ದಿಸಂಸ್ಥೆ ಸುದೀರ್ಘ ವರದಿ ಮಾಡಿದೆ.