Asianet Suvarna News Asianet Suvarna News

ರಷ್ಯಾದ ಎಸ್-400 ಟ್ರಯಂಫ್ ಭಾರತಕ್ಕೆ: ಟ್ರಂಪ್ ಬೆದರಿಕೆ ಮೋದಿಗೆ ಯಾವ ಲೆಕ್ಕಕ್ಕೆ?

ಭಾರತ-ರಷ್ಯಾ ನಡುವೆ ಐತಿಹಾಸಿಕ ರಕ್ಷಣಾ ಒಪ್ಪಂದ! ರಷ್ಯಾದ ಎಸ್-400 ಟ್ರಯಂಫ್ ಖರೀದಿಗೆ ಅಧಿಕೃತ ಒಪ್ಪಂದ! ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಬಲ ತಂದಿತ್ತ ಮೋದಿ! ವಿವಿಧ ರಕ್ಷಣಾ ಒಪ್ಪಂದಗಳಿಗೆ ಮೋದಿ-ಪುಟಿನ್ ಸಹಿ! ಅಮೆರಿಕದ ಗೊಡ್ಡು ಬೆದರಿಕೆಗಳಿಗೆ ಬಗ್ಗದ ಭಾರತ! ಭಾರತದ ಬಾಹ್ಯಾಕಾಶ ಯೋಜನೆಗೆ ರಷ್ಯಾ ಬೆಂಬಲ
 

India Signs Up with Russia for S-400 Missile Amid US Threat
Author
Bengaluru, First Published Oct 5, 2018, 2:43 PM IST

ನವದೆಹಲಿ(ಅ.5): ಭಾರತದ ಸುರಕ್ಷತೆ ವಿಷಯ ಬಂದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ಇಂದು ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ರವಾನೆಯಾಗಿದೆ.

ಅಮೆರಿಕದ ದಿಗ್ಬಂಧನ ಬೆದರಿಕೆಗೆ ಸೆಡ್ಡು ಹೊಡೆದಿರುವ ಭಾರತ, 36 ಸಾವಿರ ಕೋಟಿ ರೂ. ವೆಚ್ಚದಲ್ಲಿ 'ಎಸ್-400 ಟ್ರಯಂಫ್' ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಅಧಿಕೃತವಾಗಿ ರಷ್ಯಾದೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಬಲ ಬಂದಂತಾಗಿದೆ.

ಭಾರತ ಹಾಗೂ ರಷ್ಯಾ ನಡುವಣ 19ನೇ ದ್ವಿಪಕ್ಷೀಯ ಸಮಾವೇಶ ರಾಜಧಾನಿ ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಆರಂಭವಾಗಿದ್ದು, ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಯಶಸ್ವಿ ನಿರ್ಬಂಧಿತ ಸಭೆ ನಡೆಸಿದ್ದಾರೆ. 

ಪುಟಿನ್ ಜೊತೆಗೆ ಮಾತುಕತೆ ನಡೆಸಿರುವ ಮೋದಿ, ಎಸ್-400 ಟ್ರಯಂಫ್'ಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ, ಉಭಯ ರಾಷ್ಟ್ರಗಳು ಇನ್ನಿತರೆ ಮಹತ್ವದ ಒಪ್ಪಂದಕ್ಕೂ ಸಹಿ ಹಾಕಿವೆ ಎಂದು ಮೂಲಗಳು ತಿಳಿಸಿವೆ. 

ರಷ್ಯಾದ ಸೈಬೀರಿಯಾ ಬಳಿಯಿರುವ ನೊವೊಸಿಬಿರ್ಸ್ಕ್ ನಲ್ಲಿ ಭಾರತೀಯ ಮೇಲ್ವಿಚಾರಣಾ ಕೇಂದ್ರವನ್ನು ನಿರ್ಮಿಸುವ ಕುರಿತಂತೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ರಷ್ಯಾದಿಂದ ಸಮರ ಸಾಮಾಗ್ರಿಗಳನ್ನು ಖರೀದಿಸಿದ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾದಿಂದ ಎಸ್-400 ಟ್ರಯಂಫ್ ವ್ಯವಸ್ಥೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಕುರಿತು ಪರಿಶೀಲನೆ ನಡೆಸುವುದಾಗಿ ಈ ಹಿಂದೆ ಅಮೆರಿಕ ಎಚ್ಚರಿಕೆ ನೀಡಿತ್ತು. ಆದರೆ, ಈ ಒಪ್ಪಂದಕ್ಕೆ ಅಮೆರಿಕದಿಂದ ವಿಶೇಷ ವಿನಾಯಿತಿ ಪಡೆಯುವುದಾಗಿ ಭಾರತ ಹೇಳಿತ್ತು. 

ಈ ಹಿನ್ನಲೆಯಲ್ಲಿ ಸುಮಾರು 40 ಸಾವಿರ ಕೋಟಿ ರೂ. ಮೌಲ್ಯದ ಎಸ್-400 ಏರ್ ಡಿಪೆನ್ಸ್ ಸಿಸ್ಟಂ ಖರೀದಿಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು.

ಮಾತುಕತೆ ವೇಳೆ ಉಭಯ ರಾಷ್ಟ್ರಗಳು ಐಎನ್ಎಸ್ ಚಕ್ರ ಜಲಾಂತರ್ಗಾಮಿ ನೌಕೆ ಜಾಗಕ್ಕೆ ಮರು ನಿರ್ಮಾಣಗೊಂಡಿರುವ, ಪರಮಾಣು ಇಂಧನ ಚಾಲಿತ ಅಕುಲಾ ದರ್ಜೆ ಸಬ್ ಮರೀನ್ ಖರೀದಿಗೆ 14 ಸಾವಿರ ಕೋಟಿ ರೂ. ಒಪ್ಪಂದ, ಕ್ರಿವಾಕ್ ದರ್ಜೆಯ ಲಘು ನೌಕೆಗಳನ್ನು 14 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿ, ದೇಶದ ಒಂದು ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಏಕೆ-103 ರೈಫಲ್ ಉತ್ಪಾದನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಅಲ್ಲದೇ 2022ಕ್ಕೆ ಭಾರತ ಮಾನವ ಸಹಿತ ಬಾಹ್ಯಾಕಾಶ ಯೋಜನೆ ರೂಪಿಸಿದ್ದು, ಇದಕ್ಕೆ ಪೂರಕವಾಗಿ ಭಾರತದ ಗಗನಯಾತ್ರಿಗಳನ್ನು ಕೆಲ ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಕೇಂದ್ರಕ್ಕೆ ಕರೆದೊಯ್ಯುವ ಕುರಿತೂ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ ಎನ್ನಲಾಗಿದೆ.

Follow Us:
Download App:
  • android
  • ios