ಮಹಾರಾಷ್ಟ್ರ ಸರ್ಕಾರ- ವರ್ಜಿನ್‌ ಗ್ರೂಪ್‌ ನಡುವೆ ಒಪ್ಪಂದ

ಮುಂಬೈ: ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸಬಲ್ಲ ರೈಲು ವ್ಯವಸ್ಥೆ ಎಂಬ ಹಿರಿಮೆಗೆ ಪಾತ್ರವಾಗುವ ಉದ್ದೇಶ ಹೊಂದಿರುವ ಹೈಪರ್‌ಲೂಪ್‌ ರೈಲು, ವಿಶ್ವದಲ್ಲೇ ಮೊದಲ ಸಂಚಾರವನ್ನು ಮುಂಬೈ ಮತ್ತು ಪುಣೆ ನಡುವೆ ನಡೆಸಲಿದೆ.

ಇಂಥದ್ದೊಂದು ರೈಲು ಸಂಚಾರ ವ್ಯವಸ್ಥೆ ಆರಂಭಿಸುವ ಕುರಿತು ಸಾಧ್ಯಾಸಾಧ್ಯತೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮತ್ತು ಹೈಪರ್‌ಲೂಪ್‌ನ ಮಾತೃಸಂಸ್ಥೆ ವರ್ಜಿನ್‌ ಗ್ರೂಪ್‌, ಭಾನುವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಮೊದಲ ಹಂತವಾಗಿ ಈ ಮಾರ್ಗದಲ್ಲಿ ಮಾದರಿ ಟ್ರ್ಯಾಕ್‌ ನಿರ್ಮಿಸಲಾಗುವುದು. ಈ ರೈಲು ವ್ಯವಸ್ಥೆ ಸಾಧ್ಯವಾದರೆ, ಹಾಲಿ ಮುಂಬೈ ಮತ್ತು ಪುಣೆ ನಡುವೆ ಸಂಚಾರಕ್ಕೆ ಇರುವ ಅವಧಿ 3 ಗಂಟೆಯಿಂದ 25 ನಿಮಿಷಕ್ಕೆ ಇಳಿಯಲಿದೆ.

ಈ ಯೋಜನೆಗೆ ಸದ್ಯ 3.5 ಲಕ್ಷ ಕೋಟಿ ರು.ವೆಚ್ಚವಾಗುವ ನಿರೀಕ್ಷೆ ಇದೆ. ಈ ರೈಲುಗಳು ಗಂಟೆಗೆ 1000 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿವೆ.