ಭಾರತಕ್ಕಿಂತ ಚೀನಾ ದೇಶವು ಹೆಚ್ಚು ವಿದ್ಯುದೀಕರಣಗೊಳಿಸಿರುವುದರಿಂದ ಚೀನಾ ಹೆಚ್ಚು ಹೊಳೆಯಬೇಕಿತ್ತಲ್ಲವೆ? ನಕ್ಷೆಯಲ್ಲಿ ಚೀನಾಗಿಂತ ಭಾರತ ಹೆಚ್ಚು ಹೊಳೆಯುವಂತೆ ಕಾಣುತ್ತದಾದರೂ ವಾಸ್ತವವಾಗಿ ಇರುವುದೇ ಬೇರೆ ಎಂದು ಪೀಪಲ್ಸ್ ಡೈಲಿ ಆನ್'ಲೈನ್ ಪತ್ರಿಕೆ ಬರೆದಿದೆ.
ನವದೆಹಲಿ: ವಿಶ್ವದ ಶಕ್ತಿಕೇಂದ್ರವಾಗಿ ಭಾರತದ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಕಷ್ಟಪಡುತ್ತಿರುವ ಚೀನಾ ದೇಶಕ್ಕೆ ನಾಸಾದ ನಕ್ಷೆಯೊಂದು ಇನ್ನಷ್ಟು ಕೆಂಗಣ್ಣು ತಂದಿದೆ. ನಾಸಾದ ಅರ್ಥ್ಸ್ ಸಿಟಿ ಲೈಟ್ಸ್ ಯೋಜನೆಯ ಮ್ಯಾಪ್'ವೊಂದರಲ್ಲಿ ಭಾರತ ದೇಶವು ಲಕಲಕ ಹೊಳೆಯುತ್ತಿದ್ದರೆ, ಬಹುತೇಕ ಇಡೀ ಚೀನಾ ಕತ್ತಲಲ್ಲಿದ್ದಂತಿದೆ. ಈ ನಕ್ಷೆಯು ಇಡೀ ಚೀನಾದಲ್ಲಿ ಸಂಚಲನ ಮೂಡಿಸಿದೆ.
ಏನಿದು ನಕ್ಷೆ?
ವಿಶ್ವಾದ್ಯಂತ ನಗರಗಳ ವಿದ್ಯುದೀಕರಣವನ್ನು ಸೆಟಿಲೈಟ್ ಚಿತ್ರದ ಮೂಲಕ ನಾಸಾ ತೋರಿಸಿದೆ. ಲಾಜಿಕಲ್ ಆಗಿ ನೋಡಿದರೆ ಎಲೆಕ್ಟ್ರಿಫಿಕೇಶನ್ ಆಗಿರುವ ಪ್ರದೇಶಗಳು ಹೊಳೆಯುತ್ತವೆ. ಭಾರತಕ್ಕಿಂತ ಬಹಳ ಮುಂದುವರಿದಿರುವ ಚೀನಾ ದೇಶ ಹೇಗೆ ಕತ್ತಲಲ್ಲಿದೆ ಎಂಬ ಪ್ರಶ್ನೆಗೆ ಚೀನೀಯರು ತಮ್ಮದೇ ವಿವರಣೆ ಕೊಟ್ಟಿದ್ದಾರೆ.
ಚೀನೀಯರು ಏನ್ ಹೇಳ್ತಾರೆ?
* ಭಾರತಕ್ಕಿಂತ ಚೀನಾ ದೇಶವು ಹೆಚ್ಚು ವಿದ್ಯುದೀಕರಣಗೊಳಿಸಿರುವುದರಿಂದ ಚೀನಾ ಹೆಚ್ಚು ಹೊಳೆಯಬೇಕಿತ್ತಲ್ಲವೆ? ನಕ್ಷೆಯಲ್ಲಿ ಚೀನಾಗಿಂತ ಭಾರತ ಹೆಚ್ಚು ಹೊಳೆಯುವಂತೆ ಕಾಣುತ್ತದಾದರೂ ವಾಸ್ತವವಾಗಿ ಇರುವುದೇ ಬೇರೆ ಎಂದು ಪೀಪಲ್ಸ್ ಡೈಲಿ ಆನ್'ಲೈನ್ ಪತ್ರಿಕೆ ಬರೆದಿದೆ.
* ಚೀನಾ ದೇಶವು ಭಾರತದಕ್ಕಿಂತ ಹೆಚ್ಚು ಗುಡ್ಡಗಾಡು, ಬೆಟ್ಟಗಳನ್ನು ಹೊಂದಿದೆ. ಭಾರತದ ಶೇ.40ರಷ್ಟು ಭಾಗವು ಬಯಲು ಪ್ರದೇಶವಾಗಿದೆ. ಡೆಕ್ಕನ್ ಪ್ರಸ್ಥಭೂಮಿಯು 1 ಸಾವಿರ ಮೀಟರ್'ಗಿಂತ ಕಡಿಮೆ ಎತ್ತರದಲ್ಲಿದೆ. ಭಾರತದ ಮೂರು ಬದಿಗಳು ಸಮುದ್ರದಿಂದ ಆವೃತವಾಗಿವೆ. ಹೀಗಾಗಿ, ಭಾರತವು ನಾಸಾ ಮ್ಯಾಪ್'ನಲ್ಲಿ ಶೈನಿಂಗ್ ಪಡೆದಿದೆ. ಇದಕ್ಕೆ ವಿರುದ್ಧವಾಗಿ, ಚೀನಾದ ಶೇ.12ರಷ್ಟು ಭೂಮಿ ಮಾತ್ರ ಬಯಲು ಪ್ರದೇಶವಾಗಿದೆ. ಅದರಲ್ಲಿರುವ ಪ್ರಸ್ಥಭೂಮಿಗಳು ಹೆಚ್ಚು ಎತ್ತರದಲ್ಲಿವೆ. ಹೀಗಾಗಿ, ಬೆಳಕು ಹೆಚ್ಚು ಪ್ರತಿಫಲಿತವಾಗುವುದಿಲ್ಲ ಎಂದು ಚೀನಾದ ತಜ್ಞರು ಹೇಳುತ್ತಾರೆ.
* ನಕ್ಷೆಯಲ್ಲಿ, ಭಾರತದ ಗ್ರಾಮಗಳಲ್ಲಿ ಹೆಚ್ಚು ವಿದ್ಯುತ್'ದೀಪಗಳು ಕಾಣುತ್ತಿವೆ. ಗ್ರಾಮಗಳಲ್ಲಿ ಬಯಲು ಪ್ರದೇಶಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಬೆಳಕು ಹೆಚ್ಚು ವ್ಯಾಪಿಸಿದಂತೆ ತೋರುತ್ತವೆ. ಚೀನಾದಲ್ಲಿ ದೊಡ್ಡ ನಗರಗಳ ಸಂಖ್ಯೆ ದೊಡ್ಡದಿದ್ದು, ಅದರಲ್ಲಿರುವ ಬೆಳಕು ಅಷ್ಟು ಪ್ರಖರವಾಗಿ ಕಾಣುವುದಿಲ್ಲ ಎಂದು ಚೀನಾದ ಗ್ರಿಡ್ ಕಾರ್ಪೊರೇಶನ್ ಸಂಸ್ಥೆ ವಾದಿಸುತ್ತದೆ.
* ಭಾರತದಲ್ಲಿ 30 ಕೋಟಿ ಜನರಿಗೆ ವಿದ್ಯುತ್ ಸೌಲಭ್ಯವೇ ಇಲ್ಲ. 18 ಸಾವಿರ ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆಯೇ ಇಲ್ಲ. ಆದರೆ ಮ್ಯಾಪ್'ನಲ್ಲಿ ಭಾರತ ಹೇಗೆ ಹೊಳೆಯುತ್ತಿದೆ ಎಂದು ಚೀನಾದ ಪತ್ರಿಕೆಯೊಂದು ಅಚ್ಚರಿ ವ್ಯಕ್ತಪಡಿಸಿದೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತವು ವಿದ್ಯುದೀಕರಣ ಯೋಜನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವುದು ಚೀನಾದ ಗಮನಕ್ಕೆ ಬಂದಿಲ್ಲವೆನಿಸುತ್ತದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ಬರೆದಿದೆ. 2015ರಲ್ಲಿ ಮೋದಿ ಸರಕಾರವು 18,452 ಗ್ರಾಮಗಳಿಗೆ ವಿದ್ಯುತ್ ವ್ಯವಸ್ಥೆ ಮಾಡುವ ಸಂಕಲ್ಪ ತೊಟ್ಟಿತು. ಈ ವರ್ಷದ ಮಾರ್ಚ್'ನಲ್ಲಿ 13 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಇನ್ನುಳಿದ ಗ್ರಾಮಗಳಿಗೆ 2018ರ ಮೇ ವೇಳೆಗೆ ವಿದ್ಯುತ್ ಸಂಪರ್ಕ ಒದಗಿಸುವ ಗುರಿ ಇದೆ.
ಮಾಹಿತಿ: ಎಕನಾಮಿಕ್ ಟೈಮ್ಸ್
