ವಿಶ್ವಸಂಸ್ಥೆ[ಜೂ.18]: 2027ರ ವೇಳೆಗೆ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲಿ ನಂ.1 ಸ್ಥಾನಕ್ಕೆ ಏರಲಿದೆ. ಜೊತೆಗೆ 2019 ರಿಂದ 2050ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ ಎಂದು ವಿಶ್ವಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.

ಪ್ರಸ್ತುತ ವಿಶ್ವದ ಜನಸಂಖ್ಯೆ 770 ಕೋಟಿ ಇದ್ದು 2050ರ ವೇಳೆಗೆ ಇದು 970 ಕೋಟಿಗೆ ತಲುಪುವ ಸಾಧ್ಯತೆ ಇದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ 2100ನೇ ಇಸ್ವಿಗೆ ವಿಶ್ವದ ಜನಸಂಖ್ಯೆ 1100 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ತಿಳಿಸಿದೆ. ಈ ಹಿಂದಿನ ವರದಿ ಪ್ರಕಾರ ಭಾರತ 2022ರಲ್ಲೇ ಚೀನಾವನ್ನು ಹಿಂದಿಕ್ಕಬೇಕಿತ್ತು.

2050ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಆಗಲಿರುವ ಒಟ್ಟು ಏರಿಕೆಯಲ್ಲಿ ಶೇ.50ಕ್ಕಿಂತ ಹೆಚ್ಚು ಪಾಲು ಕೇವಲ 9 ದೇಶಗಳಲ್ಲಿ ಇರಲಿದೆ. ಅವುಗಳೆಂದರೆ ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೋ, ಇಥಿಯೋಫಿಯಾ, ತಾಂಜೇನಿಯಾ, ಇಂಡೋನೇಷ್ಯಾ, ಈಜಿಪ್ಟ್‌ ಮತ್ತು ಅಮೆರಿಕ.

ಪ್ರಸ್ತುತ ಚೀನಾದ ಜನಸಂಖ್ಯೆ 143 ಕೋಟಿ ಇದ್ದರೆ, ಭಾರತದ ಜನಸಂಖ್ಯೆ 137 ಕೋಟಿ. ಇದು ವಿಶ್ವಕ್ಕೆ ಹೋಲಿಸಿದರೆ ಶೇ.19 ಮತ್ತು ಶೇ.18ರಷ್ಟು. ಅದರ ನಂತರದ ಸ್ಥಾನದಲ್ಲಿ ಅಮೆರಿಕ ಇದ್ದು 32 ಕೋಟಿ ಮತ್ತು ಇಂಡೋನೇಷ್ಯಾ 27 ಕೋಟಿ ಜನಸಂಖ್ಯೆ ಹೊಂದಿವೆ.