ಇಸ್ಲಾಮಾಬಾದ್‌[ಡಿ.08]: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಮುಸ್ಲಿಂ ವಿರೋಧಿ ಹಾಗೂ ಪಾಕಿಸ್ತಾನ ವಿರೋಧಿ ಚಿಂತನೆ ಹೊಂದಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 2019ರ ಭಾರತದ ಲೋಕಸಭಾ ಚುನಾವಣೆ ಬಳಿಕ ಭಾರತ-ಪಾಕಿಸ್ತಾನ ನಡುವೆ ಶಾಂತಿ ಮಾತುಕತೆ ನಡೆಯಲಿವೆ ಎಂದು ಇಮ್ರಾನ್‌ ಅವರು ಹೇಳಿದ್ದಾರೆ.

ಅಮೆರಿಕ ಮೂಲದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗೆ ಸಂವಾದ ನಡೆಸಿದ ಇಮ್ರಾನ್‌ ಖಾನ್‌ ಅವರು, ‘166 ಮಂದಿಯನ್ನು ಬಲಿಪಡೆದ 2008ರ ಮುಂಬೈ ದಾಳಿ ರೂವಾರಿಗಳನ್ನು ಸಹ ಕಾನೂನಿನ ವ್ಯಾಪ್ತಿಗೆ ತರಲು ನಮ್ಮ ಸರ್ಕಾರ ಬದ್ಧವಿದೆ. ಪಾಕಿಸ್ತಾನದ ಹಿತಾಸಕ್ತಿಯೂ ಇದೇ ಆಗಿದೆ,’ ಎಂದು ಹೇಳಿದರು.

ಇದೇ ವೇಳೆ ಅಮೆರಿಕದ ಜೊತೆಗೆ ನಾವು ಸದಾ ಕಾಲ ಉತ್ತಮ ಸಂಬಂಧ ಬಯಸುತ್ತೇವೆ. ಆದರೆ ಬಳಸಿ ಬಿಸಾಕುವ ಬಂದೂಕಿನ ರೀತಿಯಲ್ಲಿ ನಮ್ಮನ್ನು ಬಳಸಿಕೊಳ್ಳುವುದನ್ನು ಇನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.