ವಿಶ್ವಸಂಸ್ಥೆ(ಮಾ.21): ಜಾಗತಿಕ ಸಂತುಷ್ಟ ರಾಷ್ಟ್ರ ಪಟ್ಟಿಯಲ್ಲಿ ಭಾರತಕ್ಕೆ 140ನೇ ಸ್ಥಾನ ಲಭಿಸಿದ್ದು, ಕಳೆದ ಬಾರಿಗಿಂತ 7 ಸ್ಥಾನ ಕುಸಿತ ಕಂಡಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ವಿಶ್ವಸಂಸ್ತೆಯ ಜಾಗತಿಕ ಸಂತುಷ್ಟ ರಾಷ್ಟ್ರ ವರದಿ ಬಿಡುಗಡೆಯಾಗಿದ್ದು, 2018ಕ್ಕೆ ಹೋಲಿಸಿದರೆ ಭಾರತೀಯರು 2019ರಲ್ಲಿ ಕಡಿಮೆ ಸಂತುಷ್ಟರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಜಾಗತಿಕ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 140ನೇ ಸ್ಥಾನದಲ್ಲಿದ್ದು, 7 ಸ್ಥಾನಗಳ ಹಿನ್ನೆಡೆ ಪಡೆದಿದೆ. ಆಶ್ಚರ್ಯದ ಸಂಗತಿ ಎಂದರೆ ಈ ಪಟ್ಟಿಯಲ್ಲಿ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ.

ಜಾಗತಿಕ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ 67ನೇ ಸ್ಥಾನ ಗಳಿಸಿದ್ದರೆ, ಚೀನಾ 93 ಮತ್ತು ಬಾಂಗ್ಲಾದೇಶ 125ನೇ ಸ್ಥಾನದಲ್ಲಿದೆ.

ಇನ್ನು ಜಾಗತಿಕ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಫಿನ್ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ಡೆನ್ಮಾರ್ಕ್ ಎರಡನೇ, ನಾರ್ವೆ ಮೂರನೇ, ಐಲ್ಯಾಂಡ್ ಮತ್ತು ನೆದರಲ್ಯಾಂಡ್ಸ್ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ.

ಅದರಂತೆ ಜಾಗತಿಕ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ 155ನೇ, ಅಫ್ಘಾನಿಸ್ತಾನ 154ನೇ, ತಾಂಜೇನಿಯಾ 153ನೇ ಮತ್ತು ರವಾಂಡಾ 152ನೇ ಸ್ಥಾನದಲ್ಲಿವೆ.

ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕ ಜಾಗತಿಕ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದೆ.