ನವದೆಹಲಿ(ಮಾ.29): ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ತಾರ್'ಪುರ್ ಕಾರಿಡಾರ್ ಸಮಿತಿಯಲ್ಲಿ, ಖಲಿಸ್ತಾನ್ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಿರುವ ಪಾಕಿಸ್ತಾನದ ನಡೆಗೆ ಭಾರತ ತೀವ್ರ ಅಸಮಾಧಾನ ಹೊರಹಾಕಿದೆ. 

ಕರ್ತಾರ್'ಪುರ್ ಕಾರಿಡಾರ್ ಗೆ ಸಂಬಂಧಪಟ್ಟ ಸಮಿತಿಯಲ್ಲಿ ಪಾಕಿಸ್ತಾನ ಸಚಿವ ಸಂಪುಟ 10 ಸದಸ್ಯರನ್ನೊಳಗೊಂಡ, ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳಿಗೂ ಸ್ಥಾನ ನೀಡಿದೆ.

ಪಾಕಿಸ್ತಾನದ ಉಪ ಹೈಕಮಿಷನರ್ ಸಯೀದ್ ಹೈದರ್ ಶಾ ಜೊತೆಗೆ ಮಾತನಾಡಿರುವ ಭಾರತ, ಸಮಿತಿಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ಹೊರಹಾಕಿದೆ.

ಇನ್ನು ಭಾರತದ ವಿರೋಧವನ್ನು ತಳ್ಳಿ ಹಾಕಿರುವ ಪಾಕಿಸ್ತಾನ, ಭಾರತ ಈ ವಿಷಯದಲ್ಲಿ ಏಕೆ ವಿರೋಧಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.