Asianet Suvarna News Asianet Suvarna News

2030ಕ್ಕೆ ಹೊಸ ಗುರಿ ತಲುಪಲಿದೆ ಭಾರತ

2030ರ ವೇಳೆಗೆ ಭಾರತ ಹೊಸ ಹೆಜ್ಜೆಯನ್ನು ಇಡಲಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ಕಡುಬಡವರನ್ನು ಹೊಂದಿದ ದೇಶಗಳ ಪೈಕಿ ಅಗ್ರಸ್ಥಾನದಲ್ಲಿದ್ದ ಭಾರತ, ಕೊನೆಗೂ ಈ ಕಳಂಕವನ್ನು ಕಳಚಿಕೊಂಡಿದೆ.

India no longer home to the largest number of poor

ನವದೆಹಲಿ: ಅತಿ ಹೆಚ್ಚು ಪ್ರಮಾಣದಲ್ಲಿ ಕಡುಬಡವರನ್ನು ಹೊಂದಿದ ದೇಶಗಳ ಪೈಕಿ ಅಗ್ರಸ್ಥಾನದಲ್ಲಿದ್ದ ಭಾರತ, ಕೊನೆಗೂ ಈ ಕಳಂಕವನ್ನು ಕಳಚಿಕೊಂಡಿದೆ. 2018ರಲ್ಲೇ ಭಾರತ ಈ ಕಳಂಕ ತಪ್ಪಿಸಿಕೊಂಡಿದ್ದು, ಅದೀಗ ನೈಜೀರಿಯಾದ ಪಾಲಾಗಿದೆ ಎಂದು ವರದಿಯೊಂದು ಹೇಳಿದೆ.

ಹೋಮಿ ಖರಸ್‌, ಕ್ರಿಸ್ಟೋಫರ್‌ ಹಾಮೆಲ್‌ ಮತ್ತು ಮಾರ್ಟಿನ್‌ ಹೋಫರ್‌ ರಚಿಸಿ, ಅಮೆರಿಕದ ಚಿಂತಕರ ಚಾವಡಿ ಬ್ರೂಕಿಂಗ್ಸ್‌ ಬಿಡುಗಡೆ ಮಾಡಿರುವ ವರದಿ ಅನ್ವಯ, 2018ರ ಮೇ ತಿಂಗಳಲ್ಲಿ ನೈಜೀರಿಯಾ 8.7 ಕೋಟಿ ಕಡುಬಡವರನ್ನು ಹೊಂದುವ ಮೂಲಕ ಅಗ್ರಸ್ಥಾನಕ್ಕೆ ಏರಿದೆ. 7.3 ಕೋಟಿ ಕಡುಬಡವರೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ. ಈ ವರ್ಷಾಂತ್ಯದಲ್ಲಿ ಕಾಂಗೋ ದೇಶ 2ನೇ ಸ್ಥಾನಕ್ಕೆ ಏರಲಿದ್ದು ಭಾರತ 3ನೇ ಸ್ಥಾನ ತಲುಪುವ ಮೂಲಕ ಗಣನೀಯ ಸಾಧನೆ ಮಾಡಲಿದೆ.

ಭಾರತದ ಕಡುಬಡತನ ಇಳಿಕೆ ಪ್ರಮಾಣ ವಿಶ್ವದಲ್ಲೇ ಅತ್ಯಂತ ವೇಗವಾಗಿದ್ದು, ಪ್ರತಿ ನಿಮಿಷಕ್ಕೆ 42 ಜನ ಈ ರೇಖೆಯಿಂದ ಹೊರಬರುತ್ತಿದ್ದಾರೆ. ಇದೇ ಗತಿಯಲ್ಲಿ ಸಾಗಿದರೆ 2030ರ ವೇಳೆಗೆ ಕಡುಬಡವರನ್ನು ಹೊಂದಿದ ದೇಶಗಳ ಪಟ್ಟಿಯಿಂದ ಭಾರತ ಹೊರಬಲಿದೆ ಎಂದು ವರದಿ ಹೇಳಿದೆ.

ಕಡುಬಡವರೆಂದರೆ ಯಾರು?: ದಿನಕ್ಕೆ 1.9 ಡಾಲರ್‌ (130 ರು.)ಗಿಂತ ಕಡಿಮೆ ಆದಾಯ ಹೊಂದಿರುವವರನ್ನು ಕಡುಬಡವರು ಎಂದು ಲೆಕ್ಕಹಾಕಲಾಗುತ್ತದೆ.

Follow Us:
Download App:
  • android
  • ios