ನವದೆಹಲಿ: 2019ರಲ್ಲಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ವಲಯದ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್‌ ಭವಿಷ್ಯ ನುಡಿದಿದೆ.

ಪೆಸಿಫಿಕ್‌ ಮಹಾಸಾಗರದಲ್ಲಿ ಎಲ್‌ನಿನೋ ಸಾಧ್ಯತೆ ಕ್ಷೀಣಿಸುತ್ತಿರುವುದರಿಂದ ಈ ಬಾರಿ ಸಾಮಾನ್ಯ ಮುಂಗಾರು ಸುರಿಯುವ ಶೇ.50ಕ್ಕಿಂತ ಹೆಚ್ಚಿನ ಸಾಧ್ಯತೆ ಕಂಡು ಬಂದಿದೆ. ಹೆಚ್ಚುವರಿ ಮಳೆ ಸುರಿಯುವ ಅತೀ ಕಡಿಮೆ ಸಾಧ್ಯತೆ ಇದೆ ಎಂದು ಸ್ಕೈಮೆಟ್‌ ಸಿಇಒ ಜತಿನ್‌ ಸಿಂಗ್‌ ಹೇಳಿದ್ದಾರೆ.

ಕಳೆದ 50 ವರ್ಷಗಳ ಮಳೆಯ ಸರಾಸರಿಯ ಪೈಖಿ ಶೇ.96ರಿಂದ ಶೇ.104ರಷ್ಟುಮಳೆ ಆದರೆ, ಅದನ್ನು ಸಾಮಾನ್ಯ ಮುಂಗಾರು ಮಳೆ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಸರಾಸರಿ 89 ಸೆಂ.ಮೀ. ಮಳೆ ಸುರಿಯುತ್ತದೆ.

ಭಾರತದ ವಾರ್ಷಿಕ ಮಳೆಯ ಶೇ.70ರಷ್ಟುಮಳೆ ಮುಂಗಾರು ಅವಧಿಯಲ್ಲೇ ಸುರಿಯುತ್ತದೆ. 2018ರಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮುಂಗಾರು ಸುರಿದಿತ್ತು. ಆರಂಭದಲ್ಲಿ ಸಾಮಾನ್ಯ ಮುಂಗಾರಿನ ನಿರೀಕ್ಷೆ ಇದ್ದರೂ ಶೇ.9ರಷ್ಟುಮಳೆಯ ಕೊರತೆಯೊಂದಿಗೆ ಮುಂಗಾರು ಮುಕ್ತಾಯಗೊಂಡಿತ್ತು. ಕೇರಳ ಹಾಗೂ ಕರ್ನಾಟಕದ ಕೊಡಗಿನಲ್ಲಿ ಪ್ರವಾಹ ಉಂಟಾಗಿದ್ದರೆ, ಉಳಿದ ಭಾಗದಲ್ಲಿ ಮಳೆಯ ಕೊರತೆ ಆಗಿತ್ತು.