ಭಾರತವು ದಕ್ಷಿಣ ಭಾರತದಲ್ಲಿ ಅಣು ಶಸ್ತಸ್ತ್ರಗಳನ್ನು ಕೂಡಿಟ್ಟುಕೊಂಡು ರಹಸ್ಯ ಅಣು ನಗರಿ ನಿರ್ಮಿಸುತ್ತಿದೆ. ಇದರಿಂದ ಈ ಭಾಗದ ಭಾವೈಕ್ಯದ ಸಮತೋಲನದಲ್ಲಿ ಏರುಪೇರಾಗುತ್ತಿದೆ’

ಇಸ್ಲಾಮಾಬಾದ್/ನವದೆಹಲಿ(ಫೆ.09): ಭಾರತ ಸರ್ಕಾರವು ದಕ್ಷಿಣ ಭಾರತದಲ್ಲಿ ‘ರಹಸ್ಯ ಪರಮಾಣು ನಗರ’ವೊಂದನ್ನು ನಿರ್ಮಿಸುತ್ತಿದೆ ಎಂದು ಪಾಕಿಸ್ತಾನ ಗುರುವಾರ ನೇರ ಆರೋಪ ಮಾಡಿದೆ. ಈ ಆರೋಪದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯವು ‘ಇದೊಂದು ಪಾಕಿಸ್ತಾನದ ಕಲ್ಪನೆ’ ಎಂದು ಆರೋಪವನ್ನು ತಿರಸ್ಕರಿಸಿದೆ.

ಪಾಕ್ ವಿದೇಶಾಂಗ ವಕ್ತಾರ ನಫೀಸ್ ಝಕಾರಿಯಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಭಾರತವು ದಕ್ಷಿಣ ಭಾರತದಲ್ಲಿ ಅಣು ಶಸ್ತಸ್ತ್ರಗಳನ್ನು ಕೂಡಿಟ್ಟುಕೊಂಡು ರಹಸ್ಯ ಅಣು ನಗರಿ ನಿರ್ಮಿಸುತ್ತಿದೆ. ಇದರಿಂದ ಈ ಭಾಗದ ಭಾವೈಕ್ಯದ ಸಮತೋಲನದಲ್ಲಿ ಏರುಪೇರಾಗುತ್ತಿದೆ’ ಎಂದು ಆರೋಪಿಸಿದರು.

ಝಕಾರಿಯಾ ಅವರು ದಕ್ಷಿಣ ಭಾರತದ ಯಾವ ನಗರಿ ಅದು ಎಂದು ಹೇಳಲಿಲ್ಲ. ಆದರೆ, ಆ್ಯಡ್ರಿಯನ್ ಲೆವಿ ಎಂಬ ಲೇಖಕರು ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಬಗ್ಗೆ ಪುಸ್ತಕವೊಂದನ್ನು ಬರೆದು, ‘ಕರ್ನಾಟಕದ ಚಳ್ಳಕೆರೆ ಬಳಿ ಭಾರತ ‘ರಹಸ್ಯ ಅಣು ನಗರಿ’ನಿರ್ಮಿಸುತ್ತಿದೆ ಎಂದು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಚಳ್ಳಕೆರೆಯನ್ನು ಉದ್ದೇಶಿಸಿಯೇ ಈ ಆರೋಪ ಮಾಡಿದೆ ಎನ್ನಲಾಗುತ್ತಿದೆ.