ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿತರಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲುಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನೆದರ್ಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್‌ ಇಂದು ತನ್ನ ತೀರ್ಪು ಪ್ರಕಟಿಸಲಿದೆ.

ಹೀಗಾಗಿ ಭಾರತದ ಹಾಗೂ ಪಾಕಿಸ್ತಾನ ದೃಷ್ಟಿಈಗ ಅಂತಾರಾಷ್ಟ್ರೀಯ ಕೋರ್ಟ್‌ ನೀಡುವ ತೀರ್ಪಿನತ್ತ ನೆಟ್ಟಿದೆ. ಭಾರತ ಮತ್ತು ಪಾಕ್‌ ನಡುವಿನ ರಾಜತಾಂತ್ರಿಕ ಸಂಬಂಧದ ದೃಷ್ಟಿಯಿಂದಲೂ ಈ ಪ್ರಕರಣ ಮಹತ್ವ ಪಡೆದುಕೊಂಡಿದೆ. ಈ ತೀರ್ಪು ತನ್ನ ಪರವಾಗಿ ಬರಲಿದೆ ಎಂಬ ಆಶಾವಾದವನ್ನು ಭಾರತ ಇಟ್ಟುಕೊಂಡಿದೆ.

ಭಾರತದ ಪ್ರಜೆಗೆ ಬೇಹುಗಾರಿಕೆ ಆರೋಪದಲ್ಲಿ ಗಲ್ಲು ಶಿಕ್ಷೆ ನೀಡಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುವಲಿದೆಯೇ? ಈ ಪ್ರಕರಣದ ಹಿನ್ನಲೆ ಏನು? ಭಾರತ ಮತ್ತು ಪಾಕ್‌ ವಾದ ಹೇಗಿತ್ತು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ?

ಯಾರು ಕುಲಭೂಷಣ್‌ ಜಾಧವ್‌?

ಕುಲುಭೂಷಣ್‌ ಜಾಧವ್‌ ಅವರೊಬ್ಬ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ. ಕುಲಭೂಷಣ್‌ ಜಾದವ್‌ ಜನಿಸಿದ್ದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ 1970ರ ಏಪ್ರಿಲ್‌ 16ರಂದು. ತಂದೆ ಸುದೀರ್‌ ಜಾಧವ್‌ ಮಹಾರಾಷ್ಟ್ರ ಸರ್ಕಾರದಲ್ಲಿ ಪೊಲೀಸ್‌ ಅಧಿಕಾರಿ ಆಗಿದ್ದವರು. ತಾಯಿ ಅವಂತಿ ಜಾಧವ್‌ ಗೃಹಿಣಿ.

1987ರಲ್ಲಿ ಸೇನೆಗೆ ಸೇರಿದ ಜಾಧವ್‌ 2001ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಮದುವೆ ಆಗಿರುವ ಜಾದವ್‌, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇವರ ಕುಟುಂಬ ಮುಂಬೈನ ಪವೈನಲ್ಲಿ ನೆಲೆಸಿದೆ. ಸೇನೆಯಿಂದ ನಿವೃತ್ತಿಯ ಬಳಿಕ ಗುಪ್ತರಚರ ಮಾಹಿತಿ ಕಲೆಹಾಕುವ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳಲಾಗಿತ್ತು. ಇದರ ಜೊತೆ ಜೊತೆಗೆ ವ್ಯಾಪಾರ ವಹಿವಾಟಿನಲ್ಲಿ ಜಾಧವ್‌ ತಮ್ಮನ್ನು ತೊಡಗಿಸಿಕೊಂಡಿದ್ದರು. ಇರಾನ್‌ನ ಚಾಬಹಾರ್‌ನಲ್ಲಿ ತಮ್ಮದೇ ಆದ ಉದ್ಯಮ (ಸರಕು ವ್ಯಾಪಾರ)ವನ್ನು ಹೊಂದಿದ್ದರು.

ಈ ಕಾರಣಕ್ಕಾಗಿ ಆಗಾಗ ಇರಾನ್‌ಗೆ ಭೇಟಿ ನೀಡುತ್ತಿದ್ದರು. ಆದರೆ, ಪಾಕಿಸ್ತಾನದಲ್ಲಿ ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಆರೋಪದ ಮೇಲೆ ಕುಲಭೂಷಣ್‌ ಜಾಧವ್‌ ಅವರನ್ನು ಪಾಕಿಸ್ತಾನ 2016 ಮಾ.3ರಂದು ಪಾಕಿಸ್ತಾನ ಬಲೂಚಿಸ್ತಾನದಲ್ಲಿ ಬಂಧಿಸಿತ್ತು. ಬಳಿಕ ಪಾಕಿಸ್ತಾನ ಜಾಧವ್‌ಗೆ ಗೂಢಚಾರ ಎಂದು ಹಣೆ ಪಟ್ಟಿಕಟ್ಟಿತು.

ಗಲ್ಲು ಶಿಕ್ಷೆಗೆ ಗುರಿಯಾದ ಜಾಧವ್‌

ಈ ಪ್ರಕರಣವನ್ನು ತರಾತುರಿಯಲ್ಲಿ ವಿಚಾರಣೆ ನಡೆಸಿದ ಪಾಕಿಸ್ತಾನದ ಸೇನಾ ನ್ಯಾಯಾಲಯ 2017ರ ಮೇ 18ರಂದು ಕುಲಭೂಷಣ್‌ ಜಾಧವ್‌ಗೆ ಗಲ್ಲು ಶಿಕ್ಷೆ ಪ್ರಕಟಿಸಿತು. ಆದರೆ, ಜಾಧವ್‌ ಭಾರತದ ಪ್ರಜೆ ಎಂದು ಒಪ್ಪಿಕೊಂಡಿರುವ ಭಾರತ, ಅವರ ಮೇಲಿನ ಗೂಢಚಾರ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದೆ.

ಕುಲಭೂಷಣ್‌ ಜಾಧವ್‌ ವ್ಯಾಪಾರಕ್ಕೆಂದು ತೆರಳಿದ್ದ ವೇಳೆ ಅವರನ್ನು ಇರಾನ್‌ನಿಂದ ಅಪಹರಿಸಲಾಗಿದೆ ಎಂದು ಭಾರತ ಆರೋಪಿಸಿದೆ. ತೀರ್ಪು ಪ್ರಶ್ನಿಸಿ ಭಾರತ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲು ಏರಿತ್ತು.

ಜಾಧವ್‌ ಗಲ್ಲು ಶಿಕ್ಷೆ ಜಾರಿ ಮಾಡದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದ ಪರಿಣಾಮ ನೇಣು ಕುಣಿಕೆಯಿಂದ ಸದ್ಯ ಜಾಧವ್‌ ಪಾರಾಗಿದ್ದಾರೆ. ಈಗ ಜಾಧವ್‌ ಭವಿಷ್ಯ ಅಂತಾಷ್ಟ್ರೀಯ ಕೋರ್ಟ್‌ ನೀಡುವ ತೀರ್ಪಿನ ಮೇಲೆ ನೀಂತಿದೆ.

ಭಾರತದ ವಾದ ಏನು?

ಜಾಧವ್‌ ಅವರನ್ನು ಪಾಕಿಸ್ತಾನ ಮೂಲದ ಸುನ್ನಿ ಗುಂಪಿನ, ಇರಾನ್‌ನಲ್ಲಿ ಭಯೋತ್ಪಾದಕ ಕೃತ್ಯ ಎಸಗುತ್ತಿರುವ ಜೈಶ್‌ - ಉಲ್‌ - ಅದಿಲ್‌ ಸಂಘಟನೆಯ ಉಗ್ರರು ಅವರನ್ನು ಅಪಹರಿಸಿದರು. ಅಲ್ಲದೆ ಪಾಕಿಸ್ತಾನದ ಸೇನೆಗೆ ಅವರನ್ನು ಹಸ್ತಾಂತರಿಸಿದ್ದಾರೆ ಎನ್ನುವುದು ಭಾರತದ ವಾದ.

ಅಲ್ಲದೆ ಭಾರತೀಯ ಗೂಢಚಾರ ಸಂಸ್ಥೆಯು ಹೇಳುವ ಪ್ರಕಾರ, ಪಾಕ್‌ ಜಲಸೀಮೆಯನ್ನು ಅರಿಯದೆ ಪ್ರವೇಶಿಸಿದ ಜಾಧವ್‌ರನ್ನು ಬಂಧಿಸಲಾಗಿದೆ. ಬಳಿಕ ಅಲ್‌ಖೈದಾ ಜೊತೆಗೂಡಿ ನಕಲಿ ಪಾಸ್‌ಪೋರ್ಟ್‌ ಇನ್ನಿತರ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋವೂ ಇದೆ.

ಜಾಧವ್‌ಗೆ ರಾಜತಾಂತ್ರಿಕ ರಕ್ಷಣೆ ನೀಡುವಂತೆ ಭಾರತ ಹಲವಾರು ಬಾರಿ ಕೋರಿಕೆ ಸಲ್ಲಿಸಿದ್ದರೂ ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿತ್ತು. ಅಲ್ಲದೇ ಜಾಧವ್‌ ಸುರಕ್ಷೆಯ ಬಗ್ಗೆ ಭಾರತ ಕಳವಳ ವ್ಯಕ್ತಿಪಡಿಸಿದ ಬಳಿಕ ಪಾಕಿಸ್ತಾನ ಜಾಧವ್‌ರಿಂದ ತಪ್ಪೊಪ್ಪಿಗೆ ವಿಡಿಯೋವೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಅದರಲ್ಲಿ ಜಾಧವ್‌ ತಾನೊಬ್ಬ ಗೂಢಚಾರ ಎಂದು ಹೇಳಿದ್ದಾರೆ ಎನ್ನುವ ವಿಷಯವಿತ್ತು. ಆದರೆ ಅದೊಂದು ನಕಲಿ ವಿಡಿಯೋ, ಹಲವು ಭಾರಿ ಎಡಿಟ್‌ ಮಾಡಿದ, ಧ್ವನಿಯನ್ನು ಬದಲಿಸಿದ ವಿಡಿಯೋ ಅದಾಗಿತ್ತು. ಇದನ್ನು ಭಾರತ ತಿರಸ್ಕರಿಸಿತು.

ಈ ಮೂಲಕ ಜಾಧವ್‌ ಒಬ್ಬ ಬೇಹುಗಾರ ಹಾಗೂ ಉಗ್ರಗಾಮಿ ಎಂಬುದನ್ನು ಬಿಂಬಿಸಲು ಪಾಕ್‌ ತನ್ನ ಎಲ್ಲಾ ಕುತಂತ್ರಗಳನ್ನೂ ನಡೆಸಿತ್ತು. ಕೊನೆಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್‌ 2017ರ ಡಿಸೆಂಬರ್‌ನಲ್ಲಿ ಜಾಧವ್‌ ತಾಯಿ ಹಾಗೂ ಪತ್ನಿಗೆ ಜಾಧವ್‌ ಭೇಟಿಗೆ ಅವಕಾಶ ನೀಡಿತ್ತು.

ಪಾಕ್‌ ವಾದ ಏನು?

ಕುಲಭೂಷಣ್‌ ಜಾಧವ್‌ ಭಾರತದ ರೀಸಚ್‌ರ್‍ ಮತ್ತು ಅನಾಲಿಸಿಸ್‌ ವಿಂಗ್‌ (ರಾ) ಏಜೆಂಟ್‌. ಪಾಕಿಸ್ತಾನದ ಬಲೂಚಿಸ್ತಾನ, ಕರಾಚಿಯಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಬಂದಿದ್ದರು. ಇದಕ್ಕಾಗಿ ಕೆಲ ಸಂಘಟನೆಗಳಿಗೆ ಅವರು ಹಣ ಪೂರೈಸಿದ್ದಾರೆ ಎಂದು ಹೇಳಿಕೊಂಡಿದೆ. ಅಲ್ಲದೇ ಕುಲಭೂಷಣ್‌ ಜಾಧವ್‌ ಸ್ವತಃ ತಾನು ಬೇಹುಗಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂಬುದು ಪಾಕ್‌ ವಾದ.

ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೇಸ್‌

ವಿಶ್ವ ಸಂಸ್ಥೆಯ ಭಾಗವಾಗಿ ಕಾರ‍್ಯ ನಿರ್ವಹಿಸುವ ಅಂತಾರಾಷ್ಟ್ರೀಯ ನ್ಯಾಯಾಲಯ ಅಥವಾ ವಿಶ್ವ ನ್ಯಾಯಾಲಯವು ನೆದರ್‌ ಲ್ಯಾಂಡ್‌ ದೇಶದ ಹೇಗ್‌ನಲ್ಲಿ ಸ್ಥಾಪಿತವಾಗಿದೆ. ವಿಶ್ವ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿರುವ ದೇಶಗಳ ನಡುವೆ ಉದ್ಭವಿಸುವ ಹಲವು ಸಮಸ್ಯೆಗಳನ್ನು ಈ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ನಮ್ಮ ದೇಶದಲ್ಲಿನ ನ್ಯಾಯಾಲಯದ ವ್ಯವಸ್ಥೆಯಂತೆಯೇ ವಿಶ್ವ ನ್ಯಾಯಾಲಯವು ಕೂಡ ಕಾರ‍್ಯನಿರ್ವಹಿಸುತ್ತದೆ. ಅಲ್ಲದೆ ವಿಶ್ವ ಸಂಸ್ಥೆಗೆ ಕಾನೂನಾತ್ಮಕ ಸಲಹೆ ಕೊಡುವ ಕೆಲಸವನ್ನೂ ಮಾಡುತ್ತದೆ. ಅಂತಾರಾಷ್ಟ್ರೀಯ ನ್ಯಾಯಾಲಯ 10 ಮಂದಿ ನ್ಯಾಯಾಧೀಶರನ್ನು ಒಳಗೊಂಡಿದೆ.

ಜಾಧವ್‌ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ 10ರಂದು ಅವರಿಗೆ ಗಲ್ಲು ಶಿಕ್ಷೆ ತೀರ್ಪು ರದ್ದುಗೊಳಿಸುವಂತೆ ಭಾರತದ ಬೇಡಿಕೆಯನ್ನು ಪಾಕಿಸ್ತಾನ ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಾರತ ಅಂತಾರಾಷ್ಟ್ರೀಯ ಕೋರ್ಟ್‌ನ ಮೊರೆ ಹೋಗಿದೆ. ಪ್ರಕರಣದ ವಿಚರಣೆ ನಡೆಸಿದ ಕೋರ್ಟ್‌ 2017 ಮೇ 18ರಂದು ಜಾಧವ್‌ ಗಲ್ಲು ಶಿಕ್ಷೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಭಾರತದ ವಾದ ಹೇಗಿತ್ತು?

ಪಾಕ್‌ ಏಕಪಕ್ಷೀಯವಾಗಿ ವಿಚಾರಣೆ ನಡೆಸಿದೆ. ಜಾಧವ್‌ಗೆ ವಕೀಲರನ್ನು ನೇಮಿಸಿಕೊಳ್ಳುವುದಕ್ಕೂ ಅವಕಾಶ ನೀಡಿಲ್ಲ ಹಾಗೂ ನ್ಯಾಯಸಮ್ಮತವಾದ ವಿಚಾರಣೆ ನಡೆಸದ ಕಾರಣ ತೀರ್ಪನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಭಾರತದ ಪರ ವಕೀಲ ಹಾಗೂ ಮಾಜಿ ಸಾಲಿಸಿಟರ್‌ ಜನರಲ್‌ ಹರೀಶ್‌ ಸಾಳ್ವೆ ವಾದ ಮಂಡಿಸಿದ್ದಾರೆ.

ಈ ವಾದವನ್ನು ಮನ್ನಿಸಿದ ಕೋರ್ಟ್‌ ಪ್ರರಕರಣ ವಿಚಾರಣೆ ಮುಗಿಯುವ ವರೆಗೂ ಗಲ್ಲು ಶಿಕ್ಷೆಯನ್ನು ಜಾರಿ ಮಾಡದಂತೆ ಪಾಕಿಸ್ತಾನಕ್ಕೆ ಸೂಚನೆ ನಿಡಿದೆ. ಅಲ್ಲದೇ ಪಾಕ್‌ ಭಾರತೀಯ ಕೈದಿಯನ್ನು ಅನಾಗರಿಕರಂತೆ ನಡೆಸಿಕೊಂಡಕ್ಕೆ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ.

ವಿಚಾರಣೆಯ ವೇಳೆ ಭಾರತ ಹಾಗೂ ಪಾಕಿಸ್ತಾನ ಪರ ವಕೀಲರು ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದಾರೆ. ಕಾಶ್ಮೀರ ಹಾಗೂ ಬಲೂಚಿಸ್ತಾನದ್ಲಲಿ ನಿರಂತರ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನವೇ ಹೊಣೆ ಆಗಿದ್ದು, ವಿಶ್ವಸಂಸ್ಥೆಯಿಂದ ನಿಷೇಧಕ್ಕೆ ಒಳಗಾದ ಉಗ್ರರಿಗೂ ಸುರಕ್ಷಿತ ಆಶ್ರಯ ಕಲ್ಪಿಸಿದೆ ಎಂಬುದನ್ನೂ ಕೋರ್ಟ್‌ಗೆ ಹರೀಶ್‌ ಸಾಳ್ವೆ ಕೋರ್ಟ್‌ಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಭಾರತದ ಪ್ರಜೆಗೆ ರಾಜತಾಂತ್ರಿಕ ನೆರವು ನಿರಾಕರಿಸುವ ಮೂಲಕ ವಿಯೆನ್ನಾ ಒಪ್ಪಂದವವನ್ನು ಪಾಕ್‌ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.

ಕೇವಲ 1 ರು. ಸಂಭಾವನೆ ಪಡೆದು ಹರೀಶ್‌ ಸಾಳ್ವೆ ವಾದ

ಜಾದವ್‌ ಪ್ರಕರಣವನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋದಾಗ ಭಾರತದ ಪರ ವಾದಿಸಲು ಮುಂದೆ ಬಂದ ವಕೀಲ ಹರೀಶ್‌ ಸಾಳ್ವೆ, ಇವರ ಸಮರ್ಥ ವಾದದಿಂದಾಗಿ ಜಾದವ್‌ಗೆ ಪಾಕಿಸ್ತಾನ ಜಾರಿ ಮಾಡಿದ್ದ ಗಲ್ಲು ಶಿಕ್ಷೆಗೆ ವಿಶ್ವ ನ್ಯಾಯಾಲಯವು ತಡೆ ನೀಡಿತು. ಜಾದವ್‌ ಪರ ವಾದಿಸಲು ಸಾಳ್ವೆ ಪಡೆದ ಸಂಭಾವನೆ ಕೇವಲ 1 ರು.!

ಈ ಪ್ರಕರಣದಲ್ಲಿ ಇರಾನ್‌ನ ಪಾತ್ರ ಏನು?

ಜಾದವ್‌ರನ್ನು ಅಪಹರಿಸಿದ್ದು ಇರಾನ್‌ ದೇಶದ ಚಂಬಹಾರ್‌ನಲ್ಲಿ. ಆದರೆ ಇದನ್ನು ಇರಾನ್‌ ನೇರಾಗಿ ಖಚಿತಪಡಿಸುತ್ತಿಲ್ಲ. ಜಾಧವ್‌ ಇರಾನ್‌- ಪಾಕ್‌ ಗಡಿಯನ್ನು ದಾಟಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಿ, ವರದಿ ಬಂದ ಬಳಿಕ ಸ್ನೇಹ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುತ್ತೇನೆ ಎನ್ನುತ್ತಿದೆ. ಆದರೆ ಅದು ಕಷ್ಟದ ಕೆಲಸ.

ಏಕೆಂದರೆ ಇರಾನ್‌ ಭಾರತದೊಂದಿಗೆ ಭಾರೀ ಪ್ರಮಾಣದ ವ್ಯಾಪಾರ- ವ್ಯವಹಾರವನ್ನು ಹೊಂದಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನದೊಂದಿಗೂ ಸ್ನೇಹ ಕಾಯ್ದುಕೊಳ್ಳಬೇಕಾದ ಒತ್ತಡದಲ್ಲಿದೆ. ಈ ನಡುವೆ ಪಾಕ್‌ ಪ್ರಚೋದಿತ ಉಗ್ರರು ಇರಾನ್‌ ದೇಶಕ್ಕೂ ಕಾಟ ಕೊಡಲು ಆರಂಭಿಸಿರುವುದರಿಂದ ಇರಾನ್‌ ಯಾವ ನಿಲುವು ತಾಳುತ್ತದೆ ಎನ್ನುವುದು ಕುತೂಹಲದ ಸಂಗತಿ.

-ಪ್ರಶಾಂತ್ ಕೆ ಪಿ