ಹಾಗೆ ನೋಡಿದರೆ ಚಿಟ್‌ ಫಂಡ್‌ ಹಗರಣದ ತನಿಖೆಯನ್ನು ಸಿಬಿಐ ಶುರು ಮಾಡಿ 5 ವರ್ಷವಾಯಿತು. ತನ್ನ ಮಂತ್ರಿಗಳನ್ನು ಅರೆಸ್ಟ್‌ ಮಾಡಿದರೂ ಮಮತಾ ತುಟಿಪಿಟಕ್‌ ಅಂದಿರಲಿಲ್ಲ. ಆದರೆ ರವಿವಾರ ಸಂಜೆ ಯಾವಾಗ ಕೊಲ್ಕತ್ತಾ ಪೊಲೀಸ್‌ ಆಯುಕ್ತರ ಮನೆಗೆ ಸಿಬಿಐ ಟೀಮ… ಬಂದಿದ್ದು ಗೊತ್ತಾಯಿತೋ ಮಮತಾ ಎದ್ದು ಕುಳಿತಿದ್ದಾರೆ. ಮೇ ನಂತರದ ಪರಿಸ್ಥಿತಿಯಲ್ಲಿ ಮೋದಿ ಎದುರು ನಿಂತು ಗುಟುರು ಹಾಕಿ ಎದುರಿಸುವ ತಾಕತ್ತು ತನಗೆ ಮಾತ್ರ ಇದೆ. ನಾನೇ ವಿಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ತೋರಿಸಲು ಮನೆ ಬಾಗಿಲಿನತನಕ ಸಿಬಿಐ ತಂದುಕೊಟ್ಟಿರುವ ಅವಕಾಶ ಬಳಸಿಕೊಂಡಿರುವ ಮಮತಾಗೆ, ಸುಶಿಕ್ಷಿತರು ಅರಾಜಕತೆ ಎಂದರೂ ಸರಿ, ಮೋದಿ ವಿರೋಧಿಗಳ ಕಣ್ಣಲ್ಲಿ ತಾನು ದೊಡ್ಡ ಧೈರ್ಯವಂತ ನಾಯಕಿ ಎನಿಸಿಕೊಳ್ಳುತ್ತೇನೆ ಎಂದು ಚೆನ್ನಾಗಿಯೇ ಗೊತ್ತಿದೆ.

ಅದೆಲ್ಲಕ್ಕಿಂತ ಹೆಚ್ಚಾಗಿ ಬಂಗಾಳದಲ್ಲಿ ಶೇ.30ರಷ್ಟುಇರುವ ಮುಸ್ಲಿಮರು ಕಾಂಗ್ರೆಸ್‌ ಮತ್ತು ಲೆಫ್ಟ್‌ನಿಂದ ದೂರವಾಗಿ ಪೂರ್ತಿ ತೃಣಮೂಲ ಕಾಂಗ್ರೆಸ್‌ನತ್ತ ವಾಲಲಿ ಎಂಬ ತಂತ್ರವೂ ಇದೆ. ಮೋದಿ ವರ್ಸಸ್‌ ದೀದಿ ಸಂಘರ್ಷದಲ್ಲಿ ಇಬ್ಬರಿಗೂ ಲಾಭವಿದೆ. ಆದರೆ ಈ ಸಂಘರ್ಷದಲ್ಲಿ ಬಂಗಾಳದಲ್ಲಿ ಆಸ್ತಿತ್ವವನ್ನೇ ಕಳೆದುಕೊಳ್ಳುವ ಭಯದಲ್ಲಿರುವ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟರು ಮಾತ್ರ ದಿಲ್ಲಿಯಲ್ಲಿ ಕುಳಿತು ಮೋದಿ ಡಿಕ್ಟೇಟರ್‌ ಎಂದರೆ, ಕೊಲ್ಕತ್ತಾದಲ್ಲಿ ಮಮತಾ ಸರ್ವಾಧಿಕಾರಿ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಯಾರಿಗೋ ಲಾಭ, ಯಾರದೋ ಬೊಬ್ಬೆ, ಎಲ್ಲಿಯೋ ಕಣ್ಣು, ಎಲ್ಲಿಯೋ ಆಟ. ರಾಜಕಾರಣಿಗಳೇ ಹಾಗೆ, ಕೇರಂನಲ್ಲಿ ಎಲ್ಲಿಂದ ಎಲ್ಲಿಗೆ ಹೊಡೆಯುತ್ತಾರೆಂದು ತಿಳಿಯುವುದು ಕಷ್ಟ.

ಹತ್ತು ಸಾವಿರ ಕೊಟ್ಟಿದ್ದ ಜಾರ್ಜ್

1983ರಲ್ಲಿ ಜನತಾ ದಳದಿಂದ ಟಿಕೆಟ್‌ ಸಿಗದೆ ಸಿದ್ದರಾಮಯ್ಯ ಕೊನೆಗೆ ಪಕ್ಷೇತರರಾಗಿ ಸ್ಪರ್ಧಿಸಬೇಕಾದ ಸ್ಥಿತಿ ಬಂದಾಗ ದಿಲ್ಲಿಯಿಂದ ಜಾರ್ಜ್ ಫರ್ನಾಂಡಿಸ್‌ ಹತ್ತು ಸಾವಿರ ರುಪಾಯಿ ಕಳುಹಿಸಿಕೊಟ್ಟಿದ್ದರಂತೆ. ದಿಲ್ಲಿಗೆ ಜಾಜ್‌ರ್‍ ಫರ್ನಾಂಡಿಸ್‌ರ ಅಂತಿಮ ದರ್ಶನಕ್ಕೆಂದು ಬಂದಾಗ ಪತ್ರಕರ್ತರೊಂದಿಗೆ ಸುಮಾರು ಒಂದೂವರೆ ಗಂಟೆ ಬರೀ ಜಾಜ್‌ರ್‍ ಬಗ್ಗೆಯೇ ಮಾತನಾಡಿದ ಸಿದ್ದು, ‘ಕಾಂಗ್ರೆಸ್‌ನವರೇ ಜಾಜ್‌ರ್‍ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡಿರಬಹುದು. ಆದರೆ ಅದನ್ನು ನಾನು ಒಪ್ಪೋದಿಲ್ಲ. ಆತ ಅತ್ಯಂತ ಪ್ರಾಮಾಣಿಕ’ ಎಂದು ಗಟ್ಟಿಯಾಗಿ ಹೇಳುತ್ತಿದ್ದರು. 83ರಲ್ಲಿ ಜಾಜ್‌ರ್‍ ಮಾಡಿದ ಹಣ ಸಹಾಯವನ್ನು ಸಿದ್ದು ಮುಂದೆ ಯಾವಾಗಲೋ ಅವರಿಗೆ ಬೆಂಗಳೂರಿನಲ್ಲಿ ಜಮೀನು ಕೊಳ್ಳುವಾಗ ಹಣ ಕಡಿಮೆ ಬಿದ್ದಾಗ ಕೊಟ್ಟು ತೀರಿಸಿದರಂತೆ.

ದೇವೇಗೌಡರು ಮತ್ತು ಹೆಗಡೆ ಇಬ್ಬರ ಜೊತೆಗೂ ಜಾರ್ಜ್ ಸಂಬಂಧ ಚೆನ್ನಾಗಿರಲಿಲ್ಲವಂತೆ. 84ರಲ್ಲಿ ಹೆಗಡೆ, ಜಾಫರ್‌ ಷರೀಫ್‌ ವಿರುದ್ಧ ತನ್ನನ್ನು ನಿಲ್ಲಿಸಿ ಬೆಂಗಳೂರು ಉತ್ತರದಲ್ಲಿ ಬಲಿಪಶು ಮಾಡಿದರು ಎಂದು ಯಾವಾಗಲೂ ಹೇಳುತ್ತಿದ್ದ ಜಾಜ್‌ರ್‍, ಪಟೇಲರ ಬಗ್ಗೆ ಮಾತ್ರ ಯಾವತ್ತಿಗೂ ಅಭಿಮಾನದಿಂದ ಮಾತನಾಡುತ್ತಿದ್ದರಂತೆ. 2006ರಲ್ಲಿ ಜೆಡಿಎಸ್‌ನಿಂದ ಹೊರದಬ್ಬಿದಾಗ ಕೂಡ ಜಾಜ್‌ರ್‍ ಜೆಡಿಯುಗೆ ಬಾ ಎಂದು ಸಿದ್ದುಗೆ ಅನೇಕ ಬಾರಿ ಫೋನ್‌ ಮಾಡಿದ್ದರಂತೆ.

ಗದ್ದಿ ಗೌಡರಿಗೆ ಟಿಕೆಟ್‌ ಬೇಡವಂತೆ

ಬಿಜೆಪಿಯ ಬಹುತೇಕ ಎಲ್ಲ ಹಾಲಿ ಸಂಸದರಿಗೆ ಟಿಕೆಟ್‌ ಪಕ್ಕಾ ಆಗಿದೆ. ಆದರೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಮಾತ್ರ ‘ನನಗೆ ಟಿಕೆಟ್‌ ಬೇಡ, ಬೇರೆ ಯಾರಿಗಾದರೂ ಕೊಡಿ. ನನ್ನ ಬಳಿ ದುಡ್ಡು ಇಲ್ಲ. ಪ್ರತಿ ಬಾರಿ ಎಲೆಕ್ಷನ್‌ಗೆ ನಿಂತಾಗ ಹೊಲ ಮಾರಿ ದುಡ್ಡು ಕಳೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಆದರೆ ಬೇರೆ ಯಾರೇ ನಿಂತರೂ ಗೆಲ್ಲೋದು ಕಷ್ಟ, ಗಾಣಿಗ ಸಮುದಾಯದ ಗದ್ದಿಗೌಡರ ನಿಂತರೆ ಮಾತ್ರ ಬಿಜೆಪಿ ಗೆಲ್ಲಬಹುದು ಎಂದು ದಿಲ್ಲಿ ನಾಯಕರು ಮಾಡಿರುವ ಸರ್ವೇಗಳು ಹೇಳುತ್ತಿವೆ.

ಶಿವರಾಮೇಗೌಡ ಖಾಸಗಿ ಪುರಾಣ

ಕರ್ನಾಟಕ ಭವನದಲ್ಲಿ ಪತ್ರಕರ್ತರೊಂದಿಗೆ ಕಾಂಗ್ರೆಸ್‌ ಸಂಸದ ಶಿವರಾಮೇಗೌಡ ಮತ್ತು ಉಗ್ರಪ್ಪ ಚಹಾ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದರು. ಕ್ಯಾಮೆರಾ ಕಂಡಕೂಡಲೇ ಉತ್ಸಾಹಿತರಾಗುವ ಮಂಡ್ಯದ ಸಂಸದರು ‘ಒಂದು ಬೈಟ್‌ ತಗೊಳ್ರಿ. ಕಾಂಗ್ರೆಸ್‌ಗೆ ಬುದ್ಧಿಮಾತು ಹೇಳುತ್ತೇನೆ. ಸುದ್ದಿ ಓಡುತ್ತದೆ’ ಎಂದರು. ಸಹಜವಾಗಿ ಏನೂ ನ್ಯೂಸ್‌ ಇಲ್ಲದೆ ಕುಳಿತಿದ್ದ ಪತ್ರಕರ್ತರು, ಕ್ಯಾಮೆರಾ ಸಹಿತ ತಯಾರಾಗತೊಡಗಿದರು. ಆಗ ಕಸಿವಿಸಿಗೊಂಡ ಉಗ್ರಪ್ಪ, ‘ಏನಪ್ಪ ಶಿವರಾಮಾ, ಬರೀ ಜೆಡಿಎಎಸ್‌ ವೋಟ್‌ನಿಂದ ಗೆಲ್ತೀಯಾ? ಕಾಂಗ್ರೆಸ್‌ನವರದೂ ಬೇಕು ಸುಮ್ನಿರು’ ಎಂದು ಹೇಳಿದಾಗ ಶಿವರಾಮೇಗೌಡರು, ‘ಅಯ್ಯೋ ಬಿಡಣ್ಣ ನಿನಗೆ ಗೊತ್ತಿಲ್ಲ. ಪುಟ್ಟರಾಜು, ಸುರೇಶ್‌ ಗೌಡರು ದೊಡ್ಡದಾಗಿ ಮಾತನಾಡ್ತಾ ಅವ್ರೇ. ನಾನು ಯಾಕೆ ಸುಮ್ಮನಿದ್ದೇನೆ ಎಂದು ಜನ ತಪ್ಪು ತಿಳ್ಕೊಂಡು ಕೇಳ್ತಾರೆ’ ಎಂದು ಹೇಳಿದಾಗ ಸಿಟ್ಟಿಗೆದ್ದ ಉಗ್ರಪ್ಪ, ‘ಏನಾದರೂ ಮಾಡ್ಕೊ’ ಎಂದು ಅಲ್ಲಿಂದ ಹೊರಟೇಬಿಟ್ಟರು. ‘ದೇವೇಗೌಡರು ನಿಮಗೆ ಮತ್ತೆ ಟಿಕೆಟ್‌ ಕೊಡ್ತಾರಾ’ ಎಂದು ಕೇಳಿದರೆ ಏಕದಂ ಟೆನ್ಷನ್‌ ಆಗುವ ಮಂಡ್ಯದ ಹಾಲಿ ಸಂಸದರು, ‘ಅಯ್ಯೋ ಬಿಡಣ್ಣ, ನಿಖಿಲ್ ಕುಮಾರಸ್ವಾಮಿ ನಿಂತರೆ 3 ಲಕ್ಷದಿಂದ ಗೆಲ್ಲುತ್ತಾರೆ. ನಾನು ವಿರೋಧಿಸದೇ ಸುಮ್ಮನಿದ್ದರೆ ವಿಧಾನ ಪರಿಷತ್‌ಗಾದರೂ ಹೋಗಬಹುದು. ದಿಲ್ಲಿಯಲ್ಲಿದ್ದು ನಾನು ಮಾಡೋದಾದರೂ ಏನಿದೆ’ ಎನ್ನುತ್ತಾರೆ.

16 ತನ್ನಿ, ಆಪರೇಷನ್‌ ಮಾಡಿ

ಕರ್ನಾಟಕದಲ್ಲಿ ಕಾಂಗ್ರೆಸ್‌ನ 4 ಅತೃಪ್ತ ಶಾಸಕರು ಕೆಂಪು ಝಂಡಾ ಹಿಡಿದು ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ದಿಲ್ಲಿಯ ಬಿಜೆಪಿ ಹೈಕಮಾಂಡ್‌ ಮಾತ್ರ ಸರ್ಕಾರ ರಚನೆಯಲ್ಲಿ ಆಸಕ್ತಿ ಕಳೆದುಕೊಂಡಂತಿದೆ. ಜಾರಕಿಹೊಳಿ ಸಹೋದರರು ಸ್ಪೀಕರ್‌ ಮೇಲಿನ ಅವಿಶ್ವಾಸ, ಕುಮಾರಸ್ವಾಮಿ ವಿರುದ್ಧದ ಅವಿಶ್ವಾಸ ನಿರ್ಣಯ ಎಂದೆಲ್ಲ ಹೊಸ ಹೊಸ ಐಡಿಯಾ ಹುಡುಕಿ ತರುತ್ತಿದ್ದರೂ ಕೂಡ ಬಿಜೆಪಿ ಹೈಕಮಾಂಡ್‌ 16 ವಿಪಕ್ಷಗಳ ಶಾಸಕರು ರಾಜೀನಾಮೆ ಕೊಟ್ಟರೆ ಮಾತ್ರ ಆಪರೇಷನ್‌ಗೆ ಗ್ರೀನ್‌ ಸಿಗ್ನಲ್ ಕೊಡುತ್ತೇವೆ, ಉಳಿದ ಯಾವುದೇ ಸಾಹಸ ಅನಗತ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ತಿರುಗು ಬಾಣ ಆಗುತ್ತದೆ ಎಂದು ಹೇಳಿದೆಯಂತೆ.

ಪದೇಪದೇ ಡಿಕೆಶಿ ಇನ್‌ ದಿಲ್ಲಿ

ಫೆಬ್ರವರಿ 8ಕ್ಕೆ ಡಿ.ಕೆ.ಶಿವಕುಮಾರ್‌ ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಜಾರಿ ನಿರ್ದೇಶನಾಲಯ ಕೊಟ್ಟಿರುವ ನೋಟಿಸ್‌ ಡಿಕೆಶಿ ನಿದ್ದೆಗೇಡಿಸಿದೆ. ಬಹುತೇಕ ಎರಡು ದಿನಕ್ಕೊಮ್ಮೆ ರಾತ್ರಿ ವಿಶೇಷ ವಿಮಾನದಲ್ಲಿ ದಿಲ್ಲಿಗೆ ಬರುವ ಡಿಕೆಶಿ ವಕೀಲರ ಜೊತೆ ಚರ್ಚೆ ಮಾಡಿ ಬೆಳಿಗ್ಗೆ ವಾಪಸ್‌ ಹೋಗುತ್ತಾರೆ. ಮಮತಾ ಧರಣಿಯ ನಂತರ ಶಿವಕುಮಾರ್‌ ವಿಚಾರಣೆ ಕೂಡ ಮೋದಿ ಮತ್ತು ವಿಪಕ್ಷಗಳ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ. ಆದರೆ ಸತ್ಯ ಏನೆಂದರೆ ಶಿವಕುಮಾರ ಜೊತೆ ಬಹಿರಂಗವಾಗಿ ನಿಲ್ಲಲು ರಾಜ್ಯದ ಕಾಂಗ್ರೆಸ್‌ ನಾಯಕರು ತಯಾರಿಲ್ಲ.

ಕನ್ಹಯ್ಯ ಕುಮಾರ್‌ ಸ್ಪರ್ಧೆ

ಜೆಎನ್‌ಯು ಸಂಘರ್ಷದಲ್ಲಿ ದೇಶದೆಲ್ಲೆಡೆ ಕೆಲವರು ಪ್ರಶಂಸಿಸಿದ, ಕೆಲವರು ಹೀಯಾಳಿಸಿದ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ ಬಿಹಾರದ ಬೇಗೂಸರಾಯ್‌ನಿಂದ ಮಹಾಗಠಬಂಧನ್‌ ಬೆಂಬಲದೊಂದಿಗೆ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ರಾಹುಲ್ ಗಾಂಧಿ ಕನ್ಹಯ್ಯ ಕುಮಾರ್‌ರನ್ನು ನಿಲ್ಲಿಸುವ ಬಗ್ಗೆ ಉತ್ಸುಕರಾಗಿದ್ದು, ತೇಜಸ್ವಿ ಯಾದವ್‌ ಕೂಡ ಒಪ್ಪಿದ್ದಾರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್