Asianet Suvarna News Asianet Suvarna News

ರಾಹುಲ್ ಪದೋನ್ನತಿಗೆ ಗುಜರಾತ್ ದ್ವಂದ್ವ: ಇಂಡಿಯಾ ಗೇಟ್ ಸ್ಟೋರಿ

ಟಿಪ್ಪು ಹೊಗಳಿ ರಾಷ್ಟ್ರಪತಿಗಳು ವಿಧಾನಸಭೆಯಲ್ಲಿ ಮಾಡಿದ ಭಾಷಣ ರಾಜ್ಯಸರ್ಕಾರದಿಂದ ಬಂದಿದ್ದಲ್ಲ, ಬದಲಾಗಿ ಮೋದಿ ಪರವಾಗಿ ಮಾತನಾಡುತ್ತಿದ್ದ ಹಿರಿಯ ಪತ್ರಕರ್ತ ಅಶೋಕ ಮಲ್ಲಿಕ್ ಬರೆದಿದ್ದಂತೆ. ಯಾರಿಗೆ ಗೊತ್ತು ಹೀಗೆಲ್ಲ ಟಿಪ್ಪು ಬಗ್ಗೆ ಮಾತನಾಡಿ, ರಾಷ್ಟ್ರಪತಿಗಳು ನನಗೂ ಸ್ವಲ್ಪ ಫ್ರೀಡಂ ಕೊಡಿ ಎಂದು ಹೇಳುವ ಪ್ರಯತ್ನ ಮಾಡುತ್ತಿರಬಹುದು.

india gate 31 october 2017 rahul presidentship and gujarat polls

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅನ್ನಿಸುತ್ತದೆ ಮತ್ತೊಂದು ರಾಜ್ಯದ ಚುನಾವಣೆಯತ್ತ ರಾಜ್ಯದ ರಾಜಕಾರಣಿಗಳು ಲಕ್ಷ್ಯವಿಟ್ಟು ಕುಳಿತಿದ್ದಾರೆ. ರಾಜ್ಯದ ಮೂರು ಪ್ರಮುಖ ಪಕ್ಷಗಳ ರಾಜಕಾರಣಿಗಳು ಗುಜರಾತ್ ಫಲಿತಾಂಶ ಏನಾಗಬಹುದು ಎಂಬುದರ ಮೇಲೆ ಕರ್ನಾಟಕದ ರಣತಂತ್ರವನ್ನು ಹೆಣೆಯಲಿದ್ದಾರೆ. ಹೀಗಾಗಿ ಯಡಿಯೂರಪ್ಪ, ದೇವೇಗೌಡರು, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ರಾಜಕಾರಣಿಗಳು ದೆಹಲಿ ಪತ್ರಕರ್ತರು ಸಿಕ್ಕರೆ ಖಾಸಗಿಯಾಗಿ ಕೇಳುವ ಮೊದಲ ಪ್ರಶ್ನೆಯೇ ಗುಜರಾತ್‌'ನಲ್ಲಿ ಏನಾಗುತ್ತದೆ ಎಂದು. ಬರೀ ರಾಜಕಾರಣಿಗಳೇ ಏಕೆ, ರಾಜ್ಯದ 6 ರಿಂದ 8 ಪ್ರತಿಶತ ಮತದಾರರು ಕೂಡ ಗುಜರಾತ್ ಫಲಿತಾಂಶ ಮತ್ತು ಅಭ್ಯರ್ಥಿ ನೋಡಿಕೊಂಡು ನಿರ್ಧರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಕರ್ನಾಟಕದಲ್ಲಿ ಖಾಸಗಿ ಕಂಪನಿಯಿಂದ ನಡೆಸುತ್ತಿರುವ ಸರ್ವೇಯ ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಬಿಜೆಪಿಗೆ 75 ರಿಂದ 85 ಸ್ಥಾನಗಳು, ಕಾಂಗ್ರೆಸ್‌'ಗೂ ಕೂಡ ಹೆಚ್ಚು ಕಡಿಮೆ ಅಷ್ಟೇ ಸ್ಥಾನಗಳು ಹಾಗೂ ಜೆಡಿಎಸ್ ಮತ್ತು ಪಕ್ಷೇತರರು ಸೇರಿ 60 ಸ್ಥಾನಗಳನ್ನು ಪಡೆಯಬಹುದು ಎಂಬ ಅಂದಾಜಿದೆ. ಆದರೆ ಅತ್ತ ಇತ್ತ ನೋಡುತ್ತಾ ಕಾಂಪೌಂಡ್ ಮೇಲೆ ಕುಳಿತಿರುವ ಮತದಾರರಿಗೆ ಗುಜರಾತ್ ಫಲಿತಾಂಶದ ನಂತರ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಬಹುದು. ಒಂದು ವೇಳೆ ಗುಜರಾತ್‌'ನಲ್ಲಿ ಬಿಜೆಪಿ ಸುಲಭವಾಗಿ ಗೆದ್ದರೆ, ಕರ್ನಾಟಕದಲ್ಲಿ ಬಿಜೆಪಿ 100ರ ಗಡಿವರೆಗೆ ಹೋಗಲು ಮಾರ್ಗ ಸುಲಭವಾಗಬಹುದು. ಅದಾಗದೆ ಬಿಜೆಪಿ ತಿಣಕಾಡಿದರೆ ಕರ್ನಾಟಕದ ಲ್ಲಿ ಬಿಜೆಪಿ 1999ರ ಸ್ಥಿತಿಗೆ ಹೋದರೂ ಆಶ್ಚರ್ಯ ಪಡಬೇಕಿಲ್ಲ ಎನ್ನುತ್ತಾರೆ ಕರ್ನಾಟಕದಲ್ಲಿ ಓಡಾಡಿ ಸರ್ವೇ ನಡೆಸುತ್ತಿರುವವರು.

ರಾಹುಲ್ ಪದೋನ್ನತಿ, ಸೋನಿಯಾ ದ್ವಂದ್ವ:
ನವೆಂಬರ್‌'ನಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಸ್ವತಃ ಸೋನಿಯಾ ಅವರೇ ಫೈನಲ್ ಮಾಡಿದ್ದಾರಾದರು, ಗುಜರಾತ್ ಚುನಾವಣೆ ಪ್ರಕಟವಾದ ಮೇಲೆ ದ್ವಂದ್ವದಲ್ಲಿದ್ದಾರಂತೆ. ಸೋನಿಯಾ ಕಳೆದ ವಾರ ತನ್ನ ಪರಮಾಪ್ತರಾದ ಎ.ಕೆ ಅಂತೋನಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರನ್ನು ಈ ಬಗ್ಗೆ ಅಭಿಪ್ರಾಯ ಕೇಳಿದಾಗ ಅಂತೋನಿ ಮಾತ್ರ, ಗುಜರಾತ್ ಚುನಾವಣೆ ನಂತರ ಮಾಡೋಣ ಎಂದು ಹೇಳಿದ್ದಾರಂತೆ. ಈಗ ದೊಡ್ಡದಾಗಿ ಅಧ್ಯಕ್ಷ ಮಾಡಿ ಗುಜರಾತ್, ಹಿಮಾಚಲ ಎರಡೂ ಸೋತರೆ ರಾಹುಲ್ ತಂದರೂ ಉಪಯೋಗವಾಗಲಿಲ್ಲ ಎಂದು ಸಂದೇಶ ಹೋಗುತ್ತದೆ. ಒಂದು ವೇಳೆ ಗುಜರಾತ್ ಗೆದ್ದರೆ, ಅದರ ಕಥೆಯೇ ಬೇರೆ. ಆದರೆ ಗುಜರಾತ್ ಸೋತರು ಕೂಡ ಹೊಸ ಪೀಳಿಗೆಗೆ ಅಧ್ಯಕ್ಷ ಸ್ಥಾನ ಎಂದು ಹೇಳಿ ಸಮಜಾಯಿಷಿ ಕೊಡಬಹುದು ಎಂದು ಹೇಳಿದರಂತೆ. ಪರಮನಿಷ್ಠ ಅಂತೋನಿ ಹೀಗೆ ಹೇಳಿದ ಮೇಲೆ ಸೋನಿಯಾ ಸ್ವಲ್ಪ ಯೋಚನೆಯಲ್ಲಿದ್ದಾರಂತೆ.

ಡಿಸಿಎಂ ಆಂಜನೇಯ:
ದಲಿತ ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂಬ ಒತ್ತಾಯ ಹಳೆಯದು ಬಿಡಿ. ಆದರೆ ಕಳೆದ ವಾರ ದೆಹಲಿಗೆ ಬಂದಿದ್ದ ಆಂಜನೇಯ ಹೇಳಿದ ಮಾತು ಸ್ವಲ್ಪ ಇಂಟ್ರೆಸ್ಟಿಂಗ್ ಆಗಿದೆ. 2018ರಲ್ಲಿ ದಲಿತರು ಮುಖ್ಯಮಂತ್ರಿ ಆಗುತ್ತಾರೆಯೇ ಎಂದು ಕೇಳಿದಾಗ, ಅಯ್ಯೋ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಅದು ಪಕ್ಕಾ. ಆದರೆ ಕಾಂಬಿನೇಷನ್ ಮಾಡೋದಾದರೆ, ನನ್ನನ್ನು ಉಪಮುಖ್ಯಮಂತ್ರಿ ಮಾಡಿದರೆ ತುಂಬಾ ಹಿಂದುಳಿದಿರುವ, ದಲಿತ ಎಡವರ್ಗಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ ಎಂದು ಆಂಜನೇಯ ಹೇಳಿದ್ದು ತಮಾಷೆಯೋ ಗಂಭೀರ ಸಾಧ್ಯತೆಯೋ?

ಗುಜರಾತ್ ಸ್ಟೈಲ್:
ಗುಜರಾತ್ ಪಟ್ಟಿಯನ್ನು 2002ರಿಂದ ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಕೇವಲ 5 ನಿಮಿಷದಲ್ಲಿ ಓಕೇ ಮಾಡುತ್ತದೆಯಂತೆ. ಎಲ್ಲಾ ಕ್ಷೇತ್ರಗಳಿಗೂ ಸಿಂಗಲ್ ಹೆಸರನ್ನು ಗುಜರಾತ್ ಬಿಜೆಪಿ ಚುನಾವಣಾ ಸಮಿತಿ ಕಳಿಸುತ್ತದೆಯಂತೆ. ಅದನ್ನು ಜಾಸ್ತಿ ತಲೆ ಕೆಡಿಸಿಕೊಳ್ಳದೆ 5 ನಿಮಿಷದಲ್ಲಿ ಒಪ್ಪಿಗೆ ಕೊಟ್ಟು ಹೋಗುವುದು ಮಾತ್ರ ಪಾರ್ಲಿಮೆಂಟರಿ ಬೋರ್ಡ್ ಕೆಲಸವಂತೆ. ಆದರೆ 2009 ರಲ್ಲಿ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಮತ್ತು ಮೋದಿ ನಡುವೆ ಹರೇನ್ ಪಾಠಕ್ ಅವರ ಒಂದು ಸೀಟಿಗಾಗಿ ಸ್ವಲ್ಪ ಮಾತಿಗೆ ಮಾತು ಆಗಿತ್ತಂತೆ. ಇನ್ನು 2012ರಲ್ಲಿ ಮಾಯಾ ಕೊಡ್ನಾನಿಗೋಸ್ಕರ ಕೂಡ ಮೋದಿ ಮತ್ತು ರಾಜನಾಥ್ ಸಿಂಗ್ ನಡುವೆ ವಾದಪ್ರತಿವಾದ ನಡೆದಿತ್ತಂತೆ. ಈಗ ಬಿಡಿ, ಮೋದಿ ಮತ್ತು ಶಾ ತರುವ ಪಟ್ಟಿಯನ್ನು ಬಹಳ ಚೆನ್ನಾಗಿದೆ ಎಂದು ಹೇಳಿ ಒಪ್ಪಿಗೆ ಕೊಡುವುದಷ್ಟೇ ಬಿಜೆಪಿ ಸಂಸದೀಯ ಮಂಡಳಿ ಕೆಲಸ.

ಸಂಘ ತಯಾರಿ:
ಕರ್ನಾಟಕದಲ್ಲಿ ಚುನಾವಣೆಗೋಸ್ಕರ ಆರ್‌ಎಸ್‌ಎಸ್ 250 ಹಿರಿಯ ಸ್ವಯಂಸೇವಕರನ್ನು, ರಾಜ್ಯದ ಬಿಜೆಪಿ ಗೆಲ್ಲಬಹುದಾದ 150 ಕ್ಷೇತ್ರಗಳಿಗೆ ವಿಸ್ತಾರಕರನ್ನಾಗಿ ಕಳಿಸಿದೆಯಂತೆ. ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ಇದ್ದರೂ ಕೂಡ ಸಂಘ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಸಂಘದ ಸಂಚಾಲಕಮೋಹನ ಭಾಗವತ್‌ ನೀಡಿದ ಸೂಚನೆ ಮೇರೆಗೆ ರಾಜ್ಯದಲ್ಲಿಯೂ ಮುಂದಿನ 7 ತಿಂಗಳು ವಿಸ್ತಾರಕರನ್ನು ಕಳುಹಿಸಲಾಗಿದೆ. ವಾಜಪೇಯಿ ಕಾಲದಲ್ಲಿ ಸಂಘವು ಚುನಾವಣೆ ಕೆಲಸದಲ್ಲಿ ಇಷ್ಟೊಂದು ತೊಡಗಿಕೊಳ್ಳಲು ಹಿಂದೇಟು ಹಾಕುತ್ತಿತ್ತು. ಆದರೆ ಮೋದಿ ಕಾಲದಲ್ಲಿ ಬಿಜೆಪಿ ಗೆಲ್ಲುವುದು ಸಂಘದ ಶಕ್ತಿ ವರ್ಧನೆ ಒಂದು ಭಾಗ ಎಂದು ಆರ್‌ಎಸ್‌ಎಸ್ ನಾಯಕತ್ವ ಸೂಚನೆ ಕೊಟ್ಟಿದೆಯಂತೆ.

ಗಡ್ಕರಿ ಕಣ್ಣಲ್ಲಿ ದಿಲ್ಲಿ:
ಕೇಂದ್ರ ಸಚಿವ ನಿತಿನ್ ಗಡ್ಕರಿ ಪತ್ರಕರ್ತರ ಜೊತೆ ಹರಟೆ ಹೊಡೆಯಲು ಕುಳಿತರೆ ತಿಂಡಿಗೆ ಮತ್ತು ಜೋಕ್ಸ್‌'ಗಳಿಗೆ ಎಂದಿಗೂ ಬರವಿಲ್ಲ. ಬಿಸಿ ಬಿಸಿ ಜಿಲೇಬಿಯಿಂದ ಹಿಡಿದು ಮಹಾರಾಷ್ಟ್ರದ ಪೂರನ್ ಪೋಳಿವರೆಗೆ ಎಲ್ಲವನ್ನೂ ತರಿಸಿ ಪ್ರೀತಿಯಿಂದ ತಿನ್ನಿಸುವ ಗಡ್ಕರಿ ಈಗ ಸಾಕಷ್ಟು ಡಯಟ್ ಮಾಡುತ್ತಾರಾದರೂ, ಪೂರ್ತಿ ಬಿಡಬಾರದು ಸ್ವಲ್ಪ ಸ್ವಲ್ಪ ತಿನ್ನಬೇಕು. ನೀವು ತಿನ್ನಿ ನಾನು ತಿನ್ನುತ್ತೇನೆ ಎಂದು ಮೂಡ್ ಇದ್ದರೆ ಪತ್ರಕರ್ತರ ಜೊತೆ ಹರಟೆ ಹೊಡೆಯುತ್ತಾರೆ. ಗಡ್ಕರಿ ಸಾಹೇಬರಿಗೆ ದಿಲ್ಲಿ ಎಂದರೆ ಸೇರುವುದಿಲ್ಲವಂತೆ. ದಿಲ್ಲಿ ಜನ ಬಹಳ ಟೊಪ್ಪಿ ಹಾಕುವ ಪ್ರವೃತ್ತಿ. ಇದಕ್ಕೆ ಬಿಜೆಪಿ ನಾಯಕರು ಹೊರತಲ್ಲ ಎನ್ನುತ್ತಾರೆ. ಗಡ್ಕರಿ 30 ವರ್ಷದ ಹಿಂದೆ ನಾಗಪುರದಲ್ಲಿ ಫರ್ನಿಚರ್ ವ್ಯಾಪಾರ ಮಾಡುತ್ತಿದ್ದರಂತೆ. ದಿಲ್ಲಿಯಿಂದ ಫರ್ನಿಚರ್ ತರಿಸಿ ನಾಗಪುರ ವಿದರ್ಭಲ್ಲಿ ಮಾರುವುದು. ಗಡ್ಕರಿ ಅಂಗಡಿಗೆ ಬಂದ ಹೊಸದಾಗಿ ಮದುವೆಯಾದ ಹುಡುಗನೊಬ್ಬ ಮಂಚ ತೆಗೆದುಕೊಂಡು ಹೋದನಂತೆ. ಎರಡೇ ದಿನಕ್ಕೆ, ಎಂಥದ್ದು ಕೊಟ್ಟಿದ್ದೀರಿ ಮಂಚ ಮುರಿದು ಹೋಯಿತು ಎಂದು ಬಂದನಂತೆ. ಆವಾಗಿನಿಂದ ದೆಹಲಿ ವ್ಯವಹಾರ ನಿಲ್ಲಿಸಿದರಂತೆ. ಗಡ್ಕರಿ ಪ್ರಕಾರ ವ್ಯಾಪಾರದಿಂದ ಹಿಡಿದು ಪಾಲಿಟಿಕ್ಸ್‌'ವರೆಗೆ ದೆಹಲಿ ಜನ ಟೊಪ್ಪಿಗೆ ಹಾಕುವುದು ಜಾಸ್ತಿ. ಎಚ್ಚರಿಕೆಯಿಂದ ಇರಬೇಕಂತೆ.

ಟಿಪ್ಪು ಹೊಗಳಿಕೆ - ರಾಷ್ಟ್ರಪತಿ ಕಂಟ್ರೋಲ್:
ಟಿಪ್ಪು ಹೊಗಳಿ ರಾಷ್ಟ್ರಪತಿಗಳು ವಿಧಾನಸಭೆಯಲ್ಲಿ ಮಾಡಿದ ಭಾಷಣ ಕರ್ನಾಟಕ ಸರ್ಕಾರದಿಂದ ಬಂದಿದ್ದಲ್ಲ, ಬದಲಾಗಿ ರಾಷ್ಟ್ರಪತಿ ಭವನದ ಅಧಿಕಾರಿಗಳೇ ತಯಾರಿಸಿದ ಭಾಷಣವಂತೆ. ರಾಷ್ಟ್ರಪತಿಗಳ ಭಾಷಣದಿಂದ ಬಿಜೆಪಿ ನಾಯಕರು ಸುಸ್ತಾಗಿದ್ದಾರಾದರು ಹೊರಗಡೆ ಮಾತನಾಡೋಕೆ ಸಾಧ್ಯವಾಗುತ್ತಿಲ್ಲ. ಕೋವಿಂದ ರಾಷ್ಟ್ರಪತಿಗಳಾಗಿ ಆಯ್ಕೆಯಾದಾಗ ಅವರ ಕಾರ್ಯದರ್ಶಿ ಜೊತೆ ಜಂಟಿ ಕಾರ್ಯದರ್ಶಿ ಮತ್ತು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಿಸಿದ್ದು ನೇರವಾಗಿ ಪ್ರಧಾನಿ ಕಾರ್ಯಾಲಯ. ಮೋದಿ ಅವರಿಗೆ ಆಪ್ತರಾಗಿದ್ದ ಹರಿಯಾಣ ಕೇಡರ್ ಗುಜರಾತಿ ಅಧಿಕಾರಿ ಸಂಜಯ್ ಕೊಠಾರಿ ರಾಷ್ಟ್ರಪತಿಗಳಿಗೆ ಕಾರ್ಯದರ್ಶಿಯಾಗಿದ್ದರೆ. ಗುಜರಾತ್ ಭವನದಲ್ಲಿದ್ದ ಭರತ್ ಲಾಲ್ ಜಂಟಿ ಕಾರ್ಯದರ್ಶಿ. ಮೋದಿ ಪರವಾಗಿ ಮಾತನಾಡುತ್ತಿದ್ದ ಹಿರಿಯ ಪತ್ರಕರ್ತ ಅಶೋಕ ಮಲ್ಲಿಕ್ ಪತ್ರಿಕಾ ಕಾರ್ಯದರ್ಶಿ. ರಾಷ್ಟ್ರಪತಿ ಭವನದ ಮೂಲಗಳ ಪ್ರಕಾರ ಪ್ರೆಸಿಡೆಂಟ್ ಅವರ ಅವತ್ತಿನ ಭಾಷಣ ಬರೆದಿದ್ದು ಅಶೋಕ್ ಮಲ್ಲಿಕ್ ಅವರೇ ಅಂತೇ. ಯಾರಿಗೆ ಗೊತ್ತು, ಹೀಗೆಲ್ಲ ಟಿಪ್ಪು ಬಗ್ಗೆ ಮಾತನಾಡಿ, ನೋಡಿ ನೀವೇ ನೇಮಿಸಿದ ಅಧಿಕಾರಿಗಳು ಬರೆದುಕೊಟ್ಟಿದ್ದು, ನನಗೂ ಸ್ವಲ್ಪ ಫ್ರೀಡಂ ಕೊಡಿ ಎಂದು ರಾಷ್ಟ್ರಪತಿಗಳು ಹೇಳುವ ಪ್ರಯತ್ನ ಮಾಡುತ್ತಿರಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್
epaperkannadaprabha.com

Follow Us:
Download App:
  • android
  • ios