Asianet Suvarna News Asianet Suvarna News

ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಕೈತಪ್ಪಲು ಕಾರಣವೇನು? ಇಂಡಿಯಾ ಗೇಟ್ ರಹಸ್ಯ

ರಾಹುಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ 18 ನಾಯಕರಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಸ್ ಬಿಟ್ಟರೆ ಇನ್ಯಾರೂ ಕೂಡ ಡಿಕೆಶಿ ಹೆಸರಿಗೆ ಒಪ್ಪಿಗೆ ಕೊಡಲಿಲ್ಲವಂತೆ. ಸಿದ್ದರಾಮಯ್ಯ, ಖರ್ಗೆ, ಎಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್ ಅವರಂತೂ ಡಿಕೆಶಿ ಕೈಗೆ ಅಧ್ಯಕ್ಷ ಸ್ಥಾನ ಕೊಟ್ಟಲ್ಲಿ ಆಂತರಿಕ ಜಗಳದಲ್ಲಿ ಮುಳುಗಿ ಹೋಗುತ್ತದೆ ಎಂದು ನೇರವಾಗಿಯೇ ಹೇಳಿದರಂತೆ.

india gate 2017 may 30
  • Facebook
  • Twitter
  • Whatsapp

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

india gate 2017 may 30ಡಿಕೆಶಿ ಅಧ್ಯಕ್ಷಗಿರಿಗೆ ದೇವೇಗೌಡರ ರೆಡ್‌'ಸಿಗ್ನಲ್:
ಕಳೆದ ಒಂದು ತಿಂಗಳಲ್ಲಿ ಸೋನಿಯಾ ಗಾಂಧಿ, ಅಹ್ಮದ್‌ ಪಟೇಲ್‌ ಗುಲಾಂ ನಬಿ ಆಜಾದ್‌ ಜೊತೆ ಬೇರೆ ಬೇರೆ ಕಾರಣಗಳಿಗೆ ಮಾತನಾಡಿದ್ದ ದೇವೇಗೌಡರು ಯಾವುದೇ ಕಾರಣಕ್ಕೂ ಶಿವಕುಮಾರ್‌ ಅವರನ್ನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಮಾಡಬೇಡಿ ಎಂದು ಹೇಳುತ್ತಲೇ ಇದ್ದರಂತೆ. ಮೊನ್ನೆ ತಮ್ಮ ನಿವಾಸಕ್ಕೆ ಬಂದಿದ್ದ ಅಹ್ಮದ್‌ ಪಟೇಲ್‌ಗೆ ನೇರವಾಗಿಯೇ ಶಿವಕುಮಾರ್‌ಗೆ ಹುದ್ದೆ ಕೊಡಬೇಡಿ ಎಂದು ಹೇಳಿದ್ದ ದೇವೇಗೌಡರು ಹಾಗೇನಾದರೂ ಕೊಟ್ಟಲ್ಲಿ ತನಗೆ ಕಾಂಗ್ರೆಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಮೇಡಂಗೆ ಹೇಳಿ ಬಿಡಿ ಎಂದರಂತೆ. ಒಂದು ವೇಳೆ ಮುಂದೆ ಜೆಡಿಎಸ್‌ ಜೊತೆ ಹೋಗಬೇಕಾಗಿ ಬಂದಲ್ಲಿ ಕಷ್ಟವಾಗಬಹುದು ಎಂಬ ಭಯದಲ್ಲಿಯೇ ಕಾಂಗ್ರೆಸ್‌ ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಬಲೂನ್‌'ಅನ್ನು ಠುಸ್‌ ಅನ್ನಿಸಿದೆ.

ಡಿಕೆಶಿ ಹೆಸರನ್ನು ಹೇಳುವವರೇ ಇರಲಿಲ್ಲ:
ರಾಹುಲ್‌ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ 18 ನಾಯಕರಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಹೋದರ ಸಂಸದ ಡಿ.ಕೆ.ಸುರೇಶ್‌ ಬಿಟ್ಟರೆ ಇನ್ಯಾರೂ ಕೂಡ ಡಿಕೆಶಿ ಹೆಸರಿಗೆ ಒಪ್ಪಿಗೆ ಕೊಡಲಿಲ್ಲವಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಚ್‌.ಕೆ.ಪಾಟೀಲ್‌, ಬಿ.ಕೆ.ಹರಿಪ್ರಸಾದ್‌ ಮತ್ತು ಆರ್‌.ವಿ. ದೇಶಪಾಂಡೆ ಅವರಂತೂ ಡಿ.ಕೆ.ಶಿವಕುಮಾರ್‌ ಕೈಗೆ ಅಧ್ಯಕ್ಷ ಸ್ಥಾನ ಕೊಟ್ಟಲ್ಲಿ ಪಕ್ಷ ಆಂತರಿಕ ಜಗಳದಲ್ಲಿ ಮುಳುಗಿ ಹೋಗುತ್ತದೆ ಎಂದು ರಾಹುಲ್‌ ಎದುರು ನೇರವಾಗಿಯೇ ಹೇಳಿದರಂತೆ. ಒಂದಿಲ್ಲೊಂದು ಕಾಲದಲ್ಲಿ ಒಬ್ಬೊಬ್ಬ ನಾಯಕನನ್ನು ಗೋಳು ಹೊಯ್ದುಕೊಂಡಿದ್ದೇ ಇವತ್ತು ಡಿ.ಕೆ. ಶಿವಕುಮಾರ್‌ ಅವರಿಗೆ ಅಧ್ಯಕ್ಷ ಸ್ಥಾನ ಕೈಗೆ ಬಂದರೂ ಬಾಯಿಗೆ ಬರದಿರುವುದಕ್ಕೆ ಮುಖ್ಯ ಕಾರಣ ಎಂದು ರಾಜ್ಯದ ಹಿರಿಯ ನಾಯಕರೊಬ್ಬರು ಪತ್ರಕರ್ತರಿಗೆ ಸಿಹಿ ತಿನ್ನಿಸುತ್ತ ಜೋರಾಗಿ ನಗುತ್ತ ಹೇಳುತ್ತಿದ್ದರು.

ಒಂದೇ ಕಲ್ಲಿನಲ್ಲಿ ನಾನಾ ಹಕ್ಕಿಗಳು:
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಬರದಂತೆ ಶತಾಯ​ಗತಾಯ ತಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಡೆ ಇನ್ನೊಂದು ಪವರ್‌ ಸೆಂಟರ್‌ ಉದ್ಭವ ಆಗದಂತೆ ತಡೆದರೆ, ಇನ್ನೊಂದು ಕಡೆ ಪರಮೇಶ್ವರ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಮಲ್ಲಿಕಾರ್ಜುನ್‌ ಖರ್ಗೆ ಭವಿಷ್ಯದ ರಾಜಕೀಯಕ್ಕೂ ಒಂದು ವೇಗ ನಿಯಂತ್ರಕ ಹಾಕಿ​ದ್ದಾರೆ. ಯಾವಾಗ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಮಾಜಿ ಸಚಿವ ಎಸ್‌.ಆರ್‌. ಪಾಟೀಲ್‌ರನ್ನು ಅಧ್ಯಕ್ಷ ಮಾಡುವುದು ಸಾಧ್ಯ​ವಿಲ್ಲ ಎಂದು ಹೇಳಿದರೋ ಆಗಲೇ ಸಿದ್ದರಾಮಯ್ಯ ಪರಮೇಶ್ವರ್‌ ಅವರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿ ಮಾಡಲು ಯೋಜನೆ ರೂಪಿಸಿದ್ದರಂತೆ.

ಸಾರಿ ಶಿವಕುಮಾರ್‌:
ಬೆಳಿಗ್ಗೆ ರಾಹುಲ್ ನಿವಾಸದಿಂದ ಹೊರಬರುವಾಗಲೇ ಡಿ.ಕೆ.ಶಿವಕುಮಾರ್‌ ಮುಖ ಪೆಚ್ಚಾಗಿತ್ತು. ಆದರೆ ರಾಜ್ಯದ ನಾಯಕರು ವಿರೋಧಿಸಿದರೂ ಕೂಡ ಹೈಕಮಾಂಡ್‌ ಕೈ ಹಿಡಿಯಬಹುದು ಎಂದು ಸ್ವಲ್ಪ ಹುರುಪಿನಲ್ಲಿದ್ದ ಡಿಕೆಶಿ ಅವರಿಗೆ ಮಧ್ಯಾಹ್ನ 3 ಗಂಟೆಗೆ ದೂರವಾಣಿ ಕರೆ ಮಾಡಿದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ‘ಸಾರಿ ಶಿವಕುಮಾರ್‌' ಎಂದು ಹೇಳಿದರಂತೆ. ಕೂಡಲೇ ಸಹೋದರ ಡಿ.ಕೆ.ಸುರೇಶ್‌ ಅವರನ್ನು ಕರೆದುಕೊಂಡು ನಿರಾಸೆ ಮುಖ ಹೊತ್ತು ಸಿದ್ದರಾಮಯ್ಯ ಬಳಿ ತೆರಳಿದ ಶಿವಕುಮಾರ್‌ ಅವರನ್ನು ಒಳಗೆ ಕೂರಿಸಿಕೊಂಡು ಮಾತನಾಡಿದ ಮುಖ್ಯಮಂತ್ರಿಗಳು ಜಾತಿ ಸಮೀಕರಣಗಳನ್ನು ತಿಳಿಸಿ ಹೇಳಿದರಂತೆ. ನಿಮ್ಮನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಹೇಳಿದ ಸಿದ್ದು, ಸಹೋದರರಿಬ್ಬರಿಗೂ ತಂಪಾದ ಮಜ್ಜಿಗೆ ಕುಡಿಸಿ ಕಳಿಸಿದರಂತೆ.

ಪರಮೇಶ್ವರ್‌'ಗೆ ಮೂಗುದಾರ:
ಸತತ 6 ವರ್ಷಗಳ ನಂತರವೂ ಕೂಡ ಪರಮೇಶ್ವರ್‌ ಅವರನ್ನು ಅಧ್ಯಕ್ಷರಾಗಿ ಮುಂದುವರೆಸಲು ಹೈಕಮಾಂಡ್‌ ನಿರ್ಧರಿಸಲು ಮುಖ್ಯ ಕಾರಣ ಪರಂ ಅವರಿಗೆ ಕಳೆದ ಒಂದು ವಾರದಿಂದ ಸಿಕ್ಕ ಸಿದ್ದರಾಮಯ್ಯ ಬೆಂಬಲ. ಆದರೆ ಒಂದು ಕಡೆ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಎಂದು ಹೇಳಿರುವ ಹೈಕಮಾಂಡ್‌ ಇನ್ನೊಂದು ಕಡೆ ಮುಂದಿನ ಚುನಾವಣೆಗೆ ನಿಲ್ಲದೆ ಪ್ರಚಾರಕ್ಕಾಗಿ ಓಡಾಡಿ ಎಂದು ಹೇಳಿದೆಯಂತೆ. ಪರಮೇಶ್ವರ್‌ ಕೈ ಕಾಲು ಕಟ್ಟಿಹಾಕಿದ್ದು ಸಿದ್ದರಾಮಯ್ಯ ಅವರಿಗೆ ಬೇಕಿತ್ತು ಎಂದು ಸ್ವತಃ ಮುಖ್ಯಮಂತ್ರಿ ಹಿಂಬಾಲಕರೆ ಸಿಎಂ ಸೂಟ್‌ನಲ್ಲಿ ಜೋಕ್‌ ಮಾಡುತ್ತಿದ್ದರು.

6 ತಿಂಗಳ ಮೊದಲೇ ಟಿಕೆಟ್‌:
ನಾಮಪತ್ರ ಸಲ್ಲಿಸುವ ಹಿಂದಿನ ದಿನದವರೆಗೂ ಟಿಕೆಟ್‌ಗಾಗಿ ಗೋಳು ಹೊಯ್ದುಕೊಳ್ಳುವ ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿ ಚುನಾವಣೆಗೆ 6 ತಿಂಗಳು ಮೊದಲೇ 150 ಕ್ಷೇತ್ರಗಳಲ್ಲಿ ಟಿಕೆಟ್‌ ಫೈನಲ್‌ ಮಾಡಲಿದೆಯಂತೆ. ಸ್ವತಃ ರಾಹುಲ್‌ ಗಾಂಧಿ ಇವತ್ತು ರಾಜ್ಯ ಕಾಂಗ್ರೆಸ್‌ ನಾಯಕರ ಎದುರು ಈ ವಿಷಯ ಹೇಳಿದ್ದು ಹಾಗೇನಾದರೂ ಆದರೆ ಅದು ಕಾಂಗ್ರೆಸ್‌ ಸಂಸ್ಕೃತಿ ದೃಷ್ಟಿಯಿಂದ ಪವಾಡವೆ ಸರಿ.

ಹೈಕಮಾಂಡ್‌'ಗೆ ರೇಡ್‌ ಭಯ:
ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್‌ ಮತ್ತು ಎಂ.ಬಿ.ಪಾಟೀಲ್‌ ಹೆಸರನ್ನು ಪರಿಗಣಿಸದೆ ಇರಲು ಇನ್ನೊಂದು ಮುಖ್ಯ ಕಾರಣ ತೆರಿಗೆ ಅಧಿಕಾರಿಗಳ ರೇಡ್‌ ಆಗುವ ಭಯವಂತೆ. ಸಾಕಷ್ಟು ಸಂಸ್ಥೆಗಳನ್ನು ನಡೆಸುವ ಇಬ್ಬರು ನಾಯಕರ ಮೇಲೆ ತೆರಿಗೆ ರೇಡ್‌ ಆದರೆ ಚುನಾವಣಾ ಲಾಭಕ್ಕಿಂತ ಮುಜುಗರವೇ ಹೆಚ್ಚು ಎಂದು ಸ್ವತಃ ರಾಹುಲ್‌ ಗಾಂಧಿ ಕರ್ನಾಟಕದ ಒಬ್ಬ ಹಿರಿಯ ನಾಯಕರ ಎದುರು ಹೇಳಿಕೊಂಡರಂತೆ. ಆದರೆ ಇದನ್ನು ರಾಹುಲ್‌ ತಲೆಯಲ್ಲಿ ತುಂಬಿದ್ದು ಸಿದ್ದರಾಮಯ್ಯ ಎಂದು ಡಿಕೆಶಿ ಅಪ್ತರು ಅಲವತ್ತುಕೊಳ್ಳುತ್ತಿದ್ದರು.

ದೇವೇಗೌಡರ ಕೇದಾರ ಯಾತ್ರೆ:
ಮುಂದಿನ ವರ್ಷದ ಚುನಾವಣೆಯಲ್ಲಿ ಯಶಸ್ಸು ಕೊಡು ಎಂದು ಪ್ರಾರ್ಥಿಸಲು ಮಾಜಿ ಪ್ರಧಾನಿ ದೇವೇಗೌಡರು ಜೂನ್‌ 10ರಂದು ಕೇದಾರನಾಥ ಯಾತ್ರೆಗೆ ಹೊರಟಿದ್ದಾರೆ. ಪತ್ನಿ ಚೆನ್ನಮ್ಮ ಅವರನ್ನು ಕರೆದುಕೊಂಡು ಹೋಗಲಿರುವ ದೇವೇಗೌಡರು ಅಲ್ಲಿಂದ ಬದರಿನಾಥಕ್ಕೂ ಹೋಗಿ ಬರಲಿದ್ದಾರೆ. ಅಂದ ಹಾಗೆ ಜ್ಯೋತಿಷಿ ಒಬ್ಬರು ಕುಟುಂಬ ಯಾತ್ರೆ ಮಾಡಿ ಎಂದು ದೇವೇಗೌಡರಿಗೆ ಸೂಚಿಸಿದ್ದರಂತೆ.

ಅಮಿತ್‌ ಡಯಟಿಂಗ್‌:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಈಗ ಪೂರ್ತಿ ತೂಕ ಇಳಿಸುವ ಪ್ರಯತ್ನದ­ಲ್ಲಿದ್ದಾರೆ. ಭಾನುವಾರ ರಾತ್ರಿ ಪತ್ರಕರ್ತರ ಜೊತೆ ಊಟ ಮಾಡು­ವಾಗಲೂ ತುಂಬಾ ಮಿತವಾಗಿ ಊಟ ಮಾಡಿದ ಶಾ ಗುಜರಾತ್‌ ಚುನಾವಣೆಗೂ ಮೊದಲು ಹತ್ತು ಕಿಲೋ ತೂಕ ಕಡಿಮೆ ಮಾಡಲು ಪ್ರಯತ್ನ ಹಾಕಲಿದ್ದಾರಂತೆ. ‘ಅಮಿತ್‌ ಭಾಯಿ ಥೋಡಾ ವಜನ್‌ ಘಟಾವೋ' ಎಂದು ಪ್ರಧಾನಿ ಮೋದಿಯೇ ಬೆನ್ನು ಹತ್ತಿದ್ದಾರಂತೆ.

ಸೋನಿಯಾ ಮನೆಗೆ ಹೋಗದ ಗೌಡರು:
ಸೋನಿಯಾ ಗಾಂಧಿ ಕರೆದಿದ್ದ ವಿಪಕ್ಷ ನಾಯಕರ ಸಭೆಗೆ ಕಾಂಗ್ರೆಸ್‌ ನಾಯಕರು ಎಷ್ಟೇ ಬಂದು ಕರೆದರೂ ದೇವೇಗೌಡರು ಮಾತ್ರ ಊಟಕ್ಕೆ ಹೋಗಲು ಒಪ್ಪಲಿಲ್ಲ. ಆದರೆ ಅಹ್ಮದ್‌ ಪಟೇಲ್‌, ಗುಲಾಂ ನಬಿ ಆಜಾದ್‌ ಮನೆಗೆ ಬಂದು ಬಹಳ ಒತ್ತಾಯ ಮಾಡಿದ ಮೇಲೆ ಮಂಡ್ಯದಿಂದ ಸಂಸದ ಪುಟ್ಟರಾಜು ಅವರನ್ನು ಕರೆದು ಊಟಕ್ಕೆ ಹೋಗುವಂತೆ ದೇವೇಗೌಡರು ಸೂಚಿಸಿದ್ದರಂತೆ. ಈಗಲೇ ಸೋನಿಯಾ ಕರೆದರು ಎಂದು ಹೋದರೆ ಮೋದಿ ಸಿಟ್ಟಾಗುತ್ತಾರೆ ಎಂದು ಲೆಕ್ಕ ಹಾಕುತ್ತಿರುವ ದೇವೇಗೌಡರು 2018 ಮೇವರೆಗೆ ಇಬ್ಬರಿಗೂ ಆಗಾಗ ಕಾಳು ಹಾಕುತ್ತಾ ಇರಲು ತೀರ್ಮಾನಿಸಿದ್ದಾರಂತೆ.

ಒಬ್ಬರೇ ಮಲಗಲು ಹೆದರಿಕೆ:
ಸಂಸದ ಪ್ರಕಾಶ್‌ ಹುಕ್ಕೇರಿ ಅವರಿಗೆ ಲೋಕಸಭೆ ಕಾರ್ಯಾಲಯದಿಂದ ಮನೆ ಸಿಕ್ಕು 3 ತಿಂಗಳಾದರೂ ಹುಕ್ಕೇರಿ ಸಾಹೇಬರು ಕರ್ನಾಟಕ ಭವನದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹುಕ್ಕೇರಿ ಅವರಿಗೆ ರಾತ್ರಿ ಒಬ್ಬರೇ ದೊಡ್ಡ ಮನೆಯಲ್ಲಿ ಮಲಗಲು ಹೆದರಿಕೆ ಅಂತೆ. ಪತ್ನಿ ಮೊಮ್ಮಕ್ಕಳನ್ನು ಬಿಟ್ಟು ಗಂಡನ ಜೊತೆ ದೆಹಲಿಯಲ್ಲಿರಲು ರೆಡಿ ಇಲ್ಲವಂತೆ. ಹೀಗಾಗಿ ಹುಕ್ಕೇರಿ ಅವರಿಗೆ ಸ್ವಂತ ಮನೆ ಇದ್ದರೂ ಕರ್ನಾಟಕ ಭವನದ ಸಿಂಗಲ್‌ ರೂಮೇ ಗತಿ.

ವೆಂಕಯ್ಯ ನಾಯ್ದು ಬಿರಿಯಾನಿ ಪ್ರೀತಿ:
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಪಕ್ಕಾ ಶಾಕಾಹಾರಿಗಳು. ಭಾನುವಾರ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಪ್ರಯುಕ್ತ ಅಮಿತ್‌ ಶಾ ಕರೆದಿದ್ದ ಊಟದ ಕಾರ್ಯಕ್ರಮದಲ್ಲಿ ಕೇವಲ ವೆಜ್‌ ಮೆನು ಮಾತ್ರ ಇತ್ತು. ನಾನ್‌'ವೆಜ್‌ ಐಟಂ ಇಲ್ಲದಿರುವುದನ್ನು ನೋಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ದು ‘ಅಯ್ಯೋ ನನ್ನ ಸಂಡೇ ಹಾಳಾಯಿತು. ಭಾನುವಾರ ಬಿರಿಯಾನಿ ತಿನ್ನದೆ ಇದ್ದರೆ ನನಗೆ ಸಮಾಧಾನ ಆಗೋಲ್ಲ' ಎಂದು ಪತ್ರಕರ್ತರ ಎದುರು ಬೇಸರ ತೋಡಿಕೊಳ್ಳುತ್ತಿದ್ದರು.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌ 

Follow Us:
Download App:
  • android
  • ios