* ಜಿಎಸ್'ಟಿ ಕೇಂದ್ರದ ಆರ್ಥಿಕ ಸುಧಾರಣಾ ಕ್ರಮಗಳಿಗೆ ವಿಶ್ವಬ್ಯಾಂಕ್ ಮೆಚ್ಚುಗೆ* ಆರ್ಥಿಕ ಸುಧಾರಣೆಗಳು ಮುಂದುವರಿದಲ್ಲಿ 2047ರಷ್ಟರಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧ್ಯತೆ* ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಾರ್ಜಿಯೆವಾ ಅವರಿಂದ ಭಾರತದ ಜಿಎಸ್'ಟಿಗೆ ಚಿಯರ್ಸ್* ಭಾರತವು ಮೇಲ್ಮಧ್ಯಮ ಆದಾಯದ ಆರ್ಥಿಕ ರಾಷ್ಟ್ರಗಳ ಗುಂಪಿಗೆ ಸೇರಲಿದೆ: ವಿಶ್ವಬ್ಯಾಂಕ್ ಭವಿಷ್ಯ
ನವದೆಹಲಿ(ನ. 05): ತೀವ್ರ ಟೀಕೆ ಮತ್ತು ಚರ್ಚೆಗೆ ಗುರಿಯಾಗಿರುವ ಜಿಎಸ್'ಟಿ ತೆರಿಗೆ ಪದ್ಧತಿಗೆ ವಿಶ್ವಬ್ಯಾಂಕ್ ಚಿಯರ್ಸ್ ಹೇಳಿದೆ. ಜಿಎಸ್'ಟಿ ಸೇರಿದಂತೆ ಕೇಂದ್ರ ಸರಕಾರ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳಿಂದ ಭಾರತಕ್ಕೆ ದೂರಗಾಮಿ ಲಾಭವಾಗಲಿದೆ. ಮೂರು ದಶಕದಲ್ಲಿ ಭಾರತದ ಆರ್ಥಿಕತೆಯು ತೀವ್ರಗತಿಯಲ್ಲಿ ಪ್ರಗತಿ ಹೊಂದಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಕೇಂದ್ರದ ವಾಣಿಜ್ಯ ಇಲಾಖೆ ಆಯೋಜಿಸಿದ್ದ ಉದ್ಯಮ ಸುಧಾರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಾರ್ಜಿಯೇವಾ ಅವರು, ಭಾರತವು ತನ್ನ ಆರ್ಥಿಕ ಸುಧಾರಣಾ ಕ್ರಮಗಳನ್ನು ಪಟ್ಟುಬಿಡದೇ ಮುಂದುವರಿಸಬೇಕೆಂದು ಸಲಹೆ ನೀಡಿದ್ದಾರೆ. ಇವತ್ತಿನ ಸುಧಾರಣೆಗಳು ಯಶಸ್ವಿಯಾದರೆ ಮುಂದಿನ ಸುಧಾರಣಾ ಕ್ರಮಗಳಿಗೆ ಇನ್ನಷ್ಟು ಪುಷ್ಟಿ ಸಿಗುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
"...2047ರಲ್ಲಿ ಭಾರತೀಯರು ಶತಕದ ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಗೆ ಜಾಗತಿಕ ಮಧ್ಯಮ ವರ್ಗದ ಗುಂಪಿಗೆ ಸೇರ್ಪಡೆಯಾದ ಖುಷಿಯಲ್ಲಿರುತ್ತಾರೆ. ಭಾರತವು ಉನ್ನತ ಮಧ್ಯಮಾದಾಯ(High Middle-Class Income) ರಾಷ್ಟ್ರವಾಗಿರಲಿದೆ," ಎಂದು ಕ್ರಿಸ್ಟಾಲಿನಾ ಜಾರ್ಜಿಯೇವಾ ಭವಿಷ್ಯ ನುಡಿದಿದ್ದಾರೆ.
ಭಾರತವು ಇತ್ತೀಚೆಗಷ್ಟೇ ವಿಶ್ವಬ್ಯಾಂಕ್'ನ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 130ನೇ ಸ್ಥಾನದಿಂದ 100ನೇ ಸ್ಥಾನಕ್ಕೆ ಜಿಗಿದಿತ್ತು. ಕೆಲವಾರು ವರ್ಷಗಳಿಂದ ನಡೆದ ಆರ್ಥಿಕ ಸುಧಾರಣಾ ಕ್ರಮಗಳಿಂದಾಗಿ ಭಾರತವು ಈ ಗಮನಾರ್ಹ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದು ವಿಶ್ವಬ್ಯಾಂಕ್ ಹೇಳಿದೆ. ಈಗ ತಲಾದಾಯದ ವಿಚಾರದಲ್ಲಿ ಭಾರತವು 30 ವರ್ಷದಲ್ಲಿ ವಿಶ್ವದ ಪ್ರಮುಖ ಶಕ್ತಿಯಾಗಲಿದೆ ಎನ್ನಲಾಗಿದೆ.
ಉನ್ನತ ಮಧ್ಯಮಾದಾಯದ ಆರ್ಥಿಕತೆ ಎಂದರೇನು?
ಜಿಡಿಪಿಯು ಒಟ್ಟು ದೇಶದ ಆದಾಯವಾಗಿರುತ್ತದೆ. ಆದರೆ, ರಾಷ್ಟ್ರೀಯ ತಲಾದಾಯ(Gross National Income per capita - GNI)ದ ಆಧಾರದಲ್ಲಿ ವಿಶ್ವದ ದೇಶಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ತಯಾರಿಸಿದೆ. ವಿಶ್ವದ ಆರ್ಥಿಕತೆಗಳನ್ನು ಕೆಳ ಆದಾಯ, ಕೆಳ ಮಧ್ಯಮ ಆದಾಯ, ಮೇಲ್ಮಧ್ಯಮ ಆದಾಯ ಮತ್ತು ಉನ್ನತ ಆದಾಯ ಎಂಬಿತ್ಯಾದಿ ವರ್ಗೀಕರಣ ಮಾಡಲಾಗಿದೆ.
ಜಿಎನ್'ಐ ಪ್ರಮಾಣ ಮತ್ತು ಆರ್ಥಿಕ ವರ್ಗೀಕರಣ:
1) 1,005 ಡಾಲರ್ ಮತ್ತು ಅದಕ್ಕಿಂತ ಕಡಿಮೆ ಜಿಎನ್'ಐ: ಕೆಳ ಆದಾಯದ ಆರ್ಥಿಕತೆ.
2) 1,006-3,955 ಡಾಲರ್: ಕೆಳ ಮಧ್ಯಮಾದಾಯದ ಆರ್ಥಿಕತೆ
3) 3,956-12,235 ಡಾಲರ್: ಮೇಲ್ಮಧ್ಯಮಾದಾಯದ ಆರ್ಥಿಕತೆ
4) 12,236 ಡಾಲರ್'ಗಿಂತ ಹೆಚ್ಚು: ಉನ್ನತ ಆದಾಯದ ಆರ್ಥಿಕತೆ
1,005 ಡಾಲರ್'ಗಿಂತ ಕಡಿಮೆ ಜಿಎನ್'ಐ ಇರುವ ದೇಶಗಳನ್ನು ಕೆಳ ಆದಾಯ ಆರ್ಥಿಕತೆ ಎಂದು ಪರಿಗಣಿಸಲಾಗಿದೆ. 1,006-3,955 ಡಾಲರ್ ನಡುವಿನ ಜಿಎನ್'ಐ ಇರುವ ದೇಶಗಳು ಕೆಲ ಮಧ್ಯಮಾದಾಯ ಆರ್ಥಿಕತೆಗಳೆನಿಸುತ್ತವೆ. 3,956-12,235 ಡಾಲರ್ ನಡುವಿನ ಜಿಎನ್ಐ ಇರುವ ದೇಶಗಳು ಮೇಲ್ಮಧ್ಯಮಾದಾಯ ಆರ್ಥಿಕತೆ ಎನಿಸಿದರೆ, 12,235ಕ್ಕಿಂತ ಹೆಚ್ಚು ಜಿಎನ್'ಐ ಇರುವ ದೇಶಗಳು ಉನ್ನತ ಆದಾಯ ಆರ್ಥಿಕತೆಯಾಗಿವೆ. 2016ನೇ ವರ್ಷದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ವಿಶ್ವಬ್ಯಾಂಕ್ ಈ ವರ್ಗೀಕರಣ ಮಾಡಿ ಪಟ್ಟಿ ತಯಾರಿಸಿದೆ.
ಭಾರತದ ಸ್ಥಾನ ಎಲ್ಲಿದೆ?
ಭಾರತವು ಸದ್ಯ ಕೆಳ ಮಧ್ಯಮಾದಾಯ ಆರ್ಥಿಕ ರಾಷ್ಟ್ರಗಳ ಗುಂಪಿನಲ್ಲಿದೆ. 2015ರಲ್ಲಿ ಭಾರತದ ತಲಾದಾಯ 1,590 ಡಾಲರ್ ಇತ್ತು. ಆ ವರ್ಷದ ಒಟ್ಟಾರೆ ಪಟ್ಟಿಯಲ್ಲಿ ಭಾರತವು ವಿಶ್ವದ 150ನೇ ಸ್ಥಾನದಲ್ಲಿದೆ. 2016ರಲ್ಲಿ ಭಾರತದ ಜಿಎನ್'ಐ 1,680 ಡಾಲರ್'ಗೆ ಏರಿಕೆಯಾಗಿದೆ. ಭಾರತ, ಪಾಕಿಸ್ತಾನ ಸೇರಿ ಒಟ್ಟು 52 ದೇಶಗಳು ಕೆಳ ಮಧ್ಯಮ ಆದಾಯದ ಗುಂಪಿಗೆ ಸೇರಿವೆ. ಶ್ರೀಲಂಕಾ ಕೂಡ ಇದೇ ಗುಂಪಿನಲ್ಲಿದ್ದರೂ 4 ಸಾವಿರ ಡಾಲರ್ ಆಸುಪಾಸಿನ ತಲಾದಾಯ ಹೊಂದಿ ಉತ್ತಮ ಸ್ಥಿತಿಯಲ್ಲಿದೆ. ಚೀನಾ, ಮಲೇಷ್ಯಾ, ಥಾಯ್ಲೆಂಡ್ ಮೊದಲಾದ 55 ರಾಷ್ಟ್ರಗಳು ಮೇಲ್ಮಧ್ಯಮ ಆರ್ಥಿಕತೆಯ ಗುಂಪಿಗೆ ಸೇರಿವೆ. ಮೊನಾಕೋ ದೇಶವು ಬರೋಬ್ಬರಿ 1.8 ಲಕ್ಷ ಡಾಲರ್ ತಲಾದಾಯದೊಂದಿಗೆ ವಿಶ್ವದ ನಂ. 1 ಸ್ಥಾನದಲ್ಲಿದೆ. ಹಲವು ಅರಬ್ ರಾಷ್ಟ್ರಗಳು, ಅಮೆರಿಕ, ಫ್ರಾನ್ಸ್, ಜಪಾನ್ ಮೊದಲಾದ 59 ದೇಶಗಳು ಉನ್ನತ ಆದಾಯದ ಗುಂಪಿನಲ್ಲಿವೆ.
