ಚೆನ್ನೈ(ಸೆ.30): ವಿಶ್ವದ ಬೇಡಿಕೆಯ ಪೂರೈಕೆಗಾಗಿ ಭಾರತೀಯ ಸಂಶೋಧನಾ ಕ್ಷೇತ್ರ ನಿರಂತರವಾಗಿ ದುಡಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಚೆನ್ನೈನ ಐಐಟಿ ಮದ್ರಾಸ್‌ನಲ್ಲಿ ಸಿಂಗಾಪುರ್-ಭಾರತ ಹ್ಯಾಕಥಾನ್ 2019ನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಶಾಲಾ ಹಂತದಿಂದ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ಪರಿಸರ ನಿರ್ಮಿಸಲಾಗಿದ್ದು, ಈ ಪರಿಸರ ಸಂಶೋಧನೆಗೆ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಸ್ಟಾರ್ಟ್ ಅಪ್ ವ್ಯವಸ್ಥೆಯಲ್ಲಿ ಪ್ರಮುಖ ದೇಶಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಭಾರತದ ಆರ್ಥಿಕತೆಯಲ್ಲಿ ಸ್ಟಾರ್ಟ್ ಅಪ್‌ಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಜೀವನವನ್ನು ಸುಲಭಗೊಳಿಸಲು ಭಾರತದ ತಾಂತ್ರಿಕ ನಾವೀನ್ಯದ ಮೂಲಕ ಪರಿಹಾರ ಕಂಡುಹಿಡಿದು, ಅದನ್ನು ಜಾಗತಿಕ ಬಳಕೆಗೆ ಮುಕ್ತಗೊಳಿಸುವುದು ನಮ್ಮ ಉದ್ದೇಶ ಎಂದು ಈ ವೇಳೆ ಪ್ರಧಾನಿ ಮೋದಿ ನುಡಿದರು.

ಈ ವೇಳೆ ಹ್ಯಾಕಥಾನ್'ನಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಕ್ಯಾಮರಾವೊಂದನ್ನು ನೋಡಿದ ಪ್ರಧಾನಿ, ಇದು ನಮ್ಮ ಸಂಸತ್ತಿಗೆ ಅತ್ಯಂತ ಉಪಯೋಗವಾಗಬಹುದು ಹೀಗಾಗಿ ಕೂಡಲೇ ಲೋಕಸಭಾಧ್ಯಕ್ಷ ಓಂ ಬಿರ್ಲಾ ಜೊತೆ ಈ ಕುರಿತು ಮಾತನಾಡುತ್ತೇನೆ. ಸಂಸತ್ತಿನಲ್ಲಿ ಯಾರು ಗಮನವಿಟ್ಟು ಕೇಳುತ್ತಾರೆ, ಯಾರು ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳಲು ಈ ಕ್ಯಾಮರಾ ಸಹಾಯವಾಗಬಹುದು ಎಂದು ನಗೆ ಚಟಾಕಿ ಹಾರಿಸಿದರು.