ನವದೆಹಲಿ[ಡಿ.03]: ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಒಂದಕ್ಕೆ ಹೋರಾಡಲು ಅಸಾಧ್ಯವಾದರೆ, ಅದು ಭಾರತದ ಸಹಕಾರ ಕೋರಬಹುದು ಎಂದು ನೆರೆಯ ರಾಷ್ಟ್ರಕ್ಕೆ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌, ‘ಜಮ್ಮು-ಕಾಶ್ಮೀರ ವಿಚಾರವು ಸಮಸ್ಯೆ ಎಂದು ಪರಿಗಣನೆ ಆಗುವುದೇ ಇಲ್ಲ. ಕಾರಣ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಹೀಗಾಗಿ ಆ ವಿಷಯ ಸಂಬಂಧ ಪಾಕ್‌ ಜೊತೆಗೆ ಯಾವುದೇ ಮಾತುಕತೆಯ ಅವಶ್ಯವಿಲ್ಲ. ಆದರೆ ಭಯೋತ್ಪಾದನೆ ಎಂಬುದು ಒಂದು ಸಮಸ್ಯೆಯಾಗಿದ್ದು, ಈ ಬಗ್ಗೆ ಬೇಕಿದ್ದಲ್ಲಿ ಪಾಕಿಸ್ತಾನ ಚರ್ಚೆ ನಡೆಸಬಹುದು' ಎಂದಿದ್ದಾರೆ.

ಅಲ್ಲದೇ 'ಆಫ್ಘಾನಿಸ್ತಾನದಲ್ಲಿ ಬೇರೂರಿದ ತಾಲಿಬಾನ್‌ ಸೇರಿದಂತೆ ಇತರ ಭಯೋತ್ಪಾದನೆ ವಿರುದ್ಧ ಅಲ್ಲಿನ ಸರ್ಕಾರ ಅಮೆರಿಕದ ಜೊತೆಗೂಡಿ ಹೋರಾಡುತ್ತದೆ ಎಂದಾದರೆ, ಪಾಕಿಸ್ತಾನ ಒಂದಕ್ಕೆ ಭಯೋತ್ಪಾದನೆ ವಿರುದ್ಧ ಹೋರಾಡಲು ಅಸಾಧ್ಯವೆಂದಾದರೆ, ಭಾರತದ ಸಹಾಯ ಕೋರಬಹುದಲ್ಲವೇ ಎಂದು ಪಾಕಿಸ್ತಾನ ಪ್ರಧಾನಿ ಅವರಿಗೆ ಕೇಳಲು ಬಯಸುತ್ತೇನೆ’ ಎಂದು ಗೃಹ ಸಚಿವರು ತಿಳಿಸಿದ್ದಾರೆ.