ಭಾರತ-ಪಾಕ್ ಮಾತುಕತೆ ಮೇಲೆ ಮತ್ತೆ ಕವಿದ ಕಾರ್ಮೊಡ! ಪಾಕ್ ಮಾತುಕತೆಗೆ ನೀಡಿದ್ದ ಆಹ್ವಾನ ತಿರಸ್ಕರಿಸಿದ ಭಾರತ! ಕಣಿವೆಯಲ್ಲಿ ಹೆಚ್ಚಿದ ಪಾಕ್ ಪ್ರೇರಿತ ಉಗ್ರಗಾಮಿಗಳ ಹಾವಳಿ! ಮಾತುಕತೆಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದ ಭಾರತ
ನವದೆಹಲಿ(ಸೆ.21): ಮಹತ್ವದ ಬೆಳವಣಿಗೆಯೊಂದರಲ್ಲಿ ಶಾಂತಿ ಮಾತುಕತೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಆಹ್ವಾನವನ್ನು ಭಾರತ ಇಂದು ತಿರಸ್ಕರಿಸಿದೆ.
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರುತ್ತಿದ್ದು, ಪೊಲೀಸರನ್ನು ಹತ್ಯೆ ಮಾಡುತ್ತಿರುವ ಘಟನೆಗಳು ಭದ್ರತೆ ಒದಗಿಸುವವರನ್ನೇ ದಂಗಾಗುವಂತೆ ಮಾಡಿದೆ. ಈ ಬೆಳವಣಿಗೆ ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆಗೆ ಮುಳುವಾಗಿ ಪರಿಣಮಿಸಿದೆ.
ವಿದೇಶಾಂಗ ಸಚಿವರ ಮಟ್ಟದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುವ ಪಾಕಿಸ್ತಾನದ ಪ್ರಸ್ತಾವನೆಗೆ ಒಪ್ಪಿಕೊಂಡಿದ್ದ ಭಾರತ, ಕೆಲವೇ ಗಂಟೆಗಳಲ್ಲಿ ಮಾತುಕತೆಯನ್ನು ರದ್ದುಗೊಳಿಸಿದೆ. ವಿಶ್ವಸಂಸ್ಥೆಯ ಸಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿರುವ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಕುರೇಷಿ ದ್ವಿಪಕ್ಷೀಯ ಮಾತುಕತೆ ನಡೆಸಬೇಕಿತ್ತು.
ಆದರೆ ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ದ್ವಿಪಕ್ಷೀಯ ಮಾತುಕತೆಗೆ ಒಪ್ಪಿಗೆ ಸೂಚಿಸಿದಷ್ಟೇ ವೇಗವಾಗಿ ಮಾತುಕತೆಯನ್ನು ರದ್ದುಗೊಳಿಸಿದೆ.
ದ್ವಿಪಕ್ಷೀಯ ಮಾತುಕತೆಯನ್ನು ನಡೆಸುವುದಕ್ಕೆ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ದ್ವಿಪಕ್ಷೀಯ ಮಾತುಕತೆ ನಡೆಸುವುದಾಗಿ ಘೋಷಿಸಿದ ಬಳಿಕ ಕಾಶ್ಮೀರದಲ್ಲಿ ಭದ್ರತಾ ಪಡೆಗಳನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನ ಉಗ್ರರನ್ನು ಬೆಂಬಲಿಸುತ್ತಿದೆ, ಈ ಹಿನ್ನೆಲೆಯಲ್ಲಿ ಮಾತುಕತೆಯನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
