"ಪೀರ್ ಸಾಹೀಬ್ (ಲಷ್ಕರೆ ಮುಖ್ಯಸ್ಥ ಹಫೀಜ್ ಮುಜಮ್ಮದ್ ಸಯೀದ್) ಅವರಿಗೆ ನಾನು ಬೇಕು. ಆದರೆ, ನನ್ನ ಜನರಿಗೆ ನಾನು ವಾಪಸ್ಸಾಗುವುದು ಬೇಕು. ನಮ್ಮ ಮುಂದಿನ ಕಾರ್ಯಕ್ರಮವು ಈದ್ ನಂತರ ಇರುತ್ತದೆ... ಈದ್ ಬಳಿಕ ನಮ್ಮ ಮುಂದಿನ ನಡೆಯನ್ನು ಯೋಜಿಸುತ್ತೇವೆ," ಎಂದು ಒಬ್ಬ ವ್ಯಕ್ತಿ ಮಾತನಾಡಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ. ನ್ಯೂಸ್18 ಸುದ್ದಿ ವಾಹಿನಿಯು ಈ ಆಡಿಯೋವನ್ನು ಪ್ರಸಾರ ಮಾಡಿದೆ.
ನವದೆಹಲಿ(ಜುಲೈ 12): ಪಾಕಿಸ್ತಾನವು ಕಾಶ್ಮೀರದಲ್ಲಿ ರಾಸಾಯನಿಕ ಬಾಂಬ್ ದಾಳಿ ನಡೆಸುವ ಸಂಚು ರೂಪಿಸಿದೆಯೇ? ಇಂಥದ್ದೊಂದು ಬಹಳ ಅಪಾಯಕಾರಿ ಸುದ್ದಿ ಕೇಳಿಬಂದಿದೆ. ಹಿಜ್ಬುಲ್ ಮುಜಾಹಿದೀನ್'ಗೆ ಪಾಕಿಸ್ತಾನದಿಂದ ರಾಸಾಯನಿಕ ಅಸ್ತ್ರಗಳು ಸರಬರಾಜಾಗಿರುವ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಲಭಿಸಿದೆ. ದೂರವಾಣಿ ಕರೆಗಳ ಧ್ವನಿಯನ್ನು ಛೇದಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕೈಯಲ್ಲಿ ಈಗಾಗಲೇ ಈ ರಾಸಾಯನಿಕ ಶಸ್ತ್ರಗಳಿದ್ದು, ಯಾವಾಗ ಬೇಕಾದರೂ ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದು ಕೆಲ ಸಂಭಾಷಣೆಗಳಿಂದ ಗೊತ್ತಾಗಿದೆ.
"ಪೀರ್ ಸಾಹೀಬ್ (ಲಷ್ಕರೆ ಮುಖ್ಯಸ್ಥ ಹಫೀಜ್ ಮುಜಮ್ಮದ್ ಸಯೀದ್) ಅವರಿಗೆ ನಾನು ಬೇಕು. ಆದರೆ, ನನ್ನ ಜನರಿಗೆ ನಾನು ವಾಪಸ್ಸಾಗುವುದು ಬೇಕು. ನಮ್ಮ ಮುಂದಿನ ಕಾರ್ಯಕ್ರಮವು ಈದ್ ನಂತರ ಇರುತ್ತದೆ... ಈದ್ ಬಳಿಕ ನಮ್ಮ ಮುಂದಿನ ನಡೆಯನ್ನು ಯೋಜಿಸುತ್ತೇವೆ," ಎಂದು ಒಬ್ಬ ವ್ಯಕ್ತಿ ಮಾತನಾಡಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ. ನ್ಯೂಸ್18 ಸುದ್ದಿ ವಾಹಿನಿಯು ಈ ಆಡಿಯೋವನ್ನು ಪ್ರಸಾರ ಮಾಡಿದೆ.
"ಇದೂವರೆಗೆ ನಾವು ಭಾರತೀಯ ಸೇನೆ ಮೇಲೆ ಗ್ರಿನೇಡ್ ಲಾಂಚರ್'ಗಳನ್ನು ಬಳಸಿ ದಾಳಿ ಮಾಡುತ್ತಿದ್ದೆವು. ಇದರಿಂದ ಮೂರ್ನಾಲ್ಕು ಮಂದಿಯನ್ನಷ್ಟೇ ಕೊಲ್ಲಲು ಸಾಧ್ಯವಾಗುತ್ತಿತ್ತು. ಈಗ ನಮ್ಮ ತಂತ್ರವನ್ನು ಬದಲಿಸಿಕೊಳ್ಳುವ ಸಮಯ ಬಂದಿದೆ. ನಾವು ಕೆಮಿಕಲ್ ವೆಪನ್'ಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಹತ್ಯೆಗೈಯಬಹುದು," ಎಂದು ಹಿಜ್ಬುಲ್ ಸಂಘಟನೆಯ ಆಪರೇಟಿವ್'ವೊಬ್ಬ ಹೇಳುತ್ತಾನೆ.
"ಇನ್ಷಾಲ್ಲಾ, ಪಾಕಿಸ್ತಾನದಿಂದ ಇಲ್ಲಿಯವರೆಗೆ ನಮಗೆ ಸಾಕಷ್ಟು ನೆರವು ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ಪಾಕಿಸ್ತಾನವು ಭಾರತ ವಿರೋಧಿ ಕಾರ್ಯಾಚರಣೆಯನ್ನು ಹೆಚ್ಚಿಸಲಿದೆ," ಎಂದು ಆ ಹಿಜ್ಬುಲ್ ಉಗ್ರ ಮಾತನಾಡಿರುವುದು ಆಡಿಯೋ ಕ್ಲಿಪಿಂಗ್'ನಲ್ಲಿ ಕೇಳಿಬರುತ್ತದೆ.
ಒಟ್ಟಿನಲ್ಲಿ ಭದ್ರತಾ ಸಂಸ್ಥೆಗಳಿಗೆ ಸಿಕ್ಕಿರುವ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪಿಂಗ್'ಗಳು ಪಾಕಿಸ್ತಾನದ ಕಪಟತನಕ್ಕೆ ಪ್ರಮುಖ ಸಾಕ್ಷ್ಯಗಳಾಗಿವೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನವನ್ನು ಹಣಿಯಲು ಭಾರತ ಈ ಸಾಕ್ಷ್ಯಗಳನ್ನು ಬಳಕೆ ಮಾಡುವ ಸಾಧ್ಯತೆ ಇದೆ.
ಒಂದು ಅಂದಾಜಿನ ಪ್ರಕಾರ, ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಸಕ್ರಿಯ ಹಿಜ್ಬುಲ್ ಉಗ್ರಗಾಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.