ಬೆಂಗಳೂರು :  ಕಾಂಗ್ರೆಸ್‌ ಕೋಟಾದಡಿ ಸಚಿವ ಸಂಪುಟ ಸೇರ್ಪಡೆಯಾಗಲಿದ್ದಾರೆ ಎನ್ನಲಾದ ಪಕ್ಷೇತರರಾದ ರಾಣೆಬೆನ್ನೂರು ಶಾಸಕ ಆರ್‌. ಶಂಕರ್‌ ಅವರಿಗೆ ಕಾಂಗ್ರೆಸ್‌ ಪಕ್ಷದ ಸಹ ಸದಸ್ಯರಾಗುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಪಡಿಸಿದ ಬೆನ್ನಲ್ಲೇ ಶಂಕರ್‌ ಅವರನ್ನು ಕೆಪಿಸಿಸಿ ಕಚೇರಿಗೆ ಕರೆಸಿಕೊಂಡ ದಿನೇಶ್‌ ಗುಂಡೂರಾವ್‌ ಅವರು ಇಂತಹದೊಂದು ಸೂಚನೆ ನೀಡಿದ್ದು, ಇದಕ್ಕೆ ಶಂಕರ್‌ ಕೂಡ ಒಪ್ಪಿದ್ದಾರೆ ಎನ್ನಲಾಗಿದೆ. ಈ ಹಿಂದೆ ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದ ಶಂಕರ್‌ ಅವರು ಕಾಂಗ್ರೆಸ್‌ನ ಸಹ ಸದಸ್ಯರಾಗಿರಲಿಲ್ಲ. ಕಾಂಗ್ರೆಸ್‌ ನಾಯಕತ್ವ ಹಲವು ಬಾರಿ ಸೂಚನೆ ನೀಡಿದ್ದರೂ ಅದನ್ನು ಉಪೇಕ್ಷಿಸಿದ್ದರು. ಆದರೆ, ಈ ಬಾರಿ ಸಂಪುಟ ಸೇರುವ ಮುನ್ನವೇ ಅವರಿಗೆ ಸಹ ಸದಸ್ಯರಾಗುವಂತೆ ನೇರ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್‌ ಗುಂಡೂರಾವ್‌ ಸೂಚನೆಯಂತೆ ಬಂದು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ನಾನು ಸಹ ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದ್ದೇನೆ ಎಂದು ಹೇಳಿದರು.