31 ರೊಳಗೆ ತೆರಿಗೆ ಕಟ್ಟಿ ಇಲ್ಲಾ ಕೇಸು ಎದುರಿಸಿ!

First Published 23, Mar 2018, 9:04 AM IST
Income Tax Pay before March 31
Highlights

ಕಳೆದ ಎರಡು ವರ್ಷದಿಂದ ತೆರಿಗೆ ಪಾವತಿಸದಿರುವವರಿಗೆ ಮಾ.31ರೊಳಗೆ ಪಾವತಿಸುವಂತೆ ಖಡಕ್‌ ಎಚ್ಚರಿಕೆ ನೀಡಿರುವ ಆದಾಯ ತೆರಿಗೆ ಇಲಾಖೆಯು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಒಂದು ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದೆ.

 ಬೆಂಗಳೂರು (ಮಾ.23):  ಕಳೆದ ಎರಡು ವರ್ಷದಿಂದ ತೆರಿಗೆ ಪಾವತಿಸದಿರುವವರಿಗೆ ಮಾ.31ರೊಳಗೆ ಪಾವತಿಸುವಂತೆ ಖಡಕ್‌ ಎಚ್ಚರಿಕೆ ನೀಡಿರುವ ಆದಾಯ ತೆರಿಗೆ ಇಲಾಖೆಯು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಒಂದು ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ಆದಾಯ ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರುವ ಕರ್ನಾಟಕ-ಗೋವಾ ವಲಯವು 2017-18ನೇ ಸಾಲಿನಲ್ಲಿ ಒಂದು ಲಕ್ಷ ಕೋಟಿ ರು. ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದ್ದು, ಪ್ರಸ್ತುತ 98 ಸಾವಿರ ಕೋಟಿ ರು. ಸಂಗ್ರಹಿಸಿದೆ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ-ಗೋವಾ ವಲಯದ ಮುಖ್ಯ ಆಯುಕ್ತ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆದಾಯ ತೆರಿಗೆ ಸಂಗ್ರಹದಲ್ಲಿ ಮುಂಬೈ, ದೆಹಲಿ ನಂತರ ಕರ್ನಾಟಕ-ಗೋವಾ ವಲಯ ಸ್ಥಾನ ಪಡೆದುಕೊಂಡಿದೆ. ಒಂದು ಲಕ್ಷ ಕೋಟಿ ರು. ಸಂಗ್ರಹದ ಹಾದಿಯಲ್ಲಿದ್ದು, ಇದೇ ಮೊದಲ ಬಾರಿಗೆ ತೆರಿಗೆ ಸಂಗ್ರಹದಲ್ಲಿ ಲಕ್ಷ ಕೋಟಿ ರು. ಮೀರಲಿದೆ. ಜನರಿಗೆ ತೆರಿಗೆ ಪಾವತಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯಕ್ಕೆ 98 ಸಾವಿರ ಕೋಟಿ ರು. ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಹೇಳಿದರು.

ಇಲಾಖೆಯ ಅಧಿಕಾರಿಗಳು ನಡೆಸಿರುವ ಸಮೀಕ್ಷೆ ಪ್ರಕಾರ ಕಳೆದ ಎರಡು ವರ್ಷದಿಂದ ಸುಮಾರು 500 ಮಂದಿ ತೆರಿಗೆ ಪಾವತಿ ಮಾಡದಿರುವುದು ಗೊತ್ತಾಗಿದೆ. ಸುಮಾರು 300 ಕೋಟಿ ರು.ನಷ್ಟುವ್ಯವಹಾರ ನಡೆಸಿದರೂ ತೆರಿಗೆ ಪಾವತಿಸಿಲ್ಲ. ಮಾ.31ರಂದು ತೆರಿಗೆ ಪಾವತಿಸಲು ಕೊನೆಯ ದಿನಾಂಕವಾಗಿದೆ. ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

2994 ಕೋಟಿ ರು. ಅಘೋಷಿತ ಆಸ್ತಿ ಪತ್ತೆ:

ಕರ್ನಾಟಕ ಮತ್ತು ಗೋವಾ ವಲಯ ವ್ಯಾಪ್ತಿಗೆ ಬರುವ 600ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 2994 ಕೋಟಿ ರು. ಅಘೋಷಿತ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ರಜನೀಶ್‌ ಕುಮಾರ್‌ ಹೇಳಿದರು.

600ಕ್ಕೂ ಹೆಚ್ಚು ದಾಳಿಗಳ ಪೈಕಿ 517 ಸಂಸ್ಥೆಗಳು ಸಿಬ್ಬಂದಿಯ ಟಿಡಿಎಸ್‌ ಕಡಿತ ಮಾಡುವವಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 300 ಕೋಟಿ ರು.ನಷ್ಟುಸುಸ್ತಿಯಾಗಿರುವುದು ಗೊತ್ತಾಗಿದೆ. ಕಳೆದ ವರ್ಷ 490 ಕಂಪನಿಗಳ ಮೇಲೆ ದಾಳಿ ನಡೆಸಿ 160 ಕೋಟಿ ರು. ಸುಸ್ತಿಯಾಗಿತ್ತು. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ನಡೆದಿರುವ ದಾಳಿಗಳು 436 ಕಡೆ ನಡೆದಿದ್ದು, 245 ಕೋಟಿ ರು. ಸುಸ್ತಿಯಾಗಿದೆ. ವಂಚನೆ ಪ್ರಕರಣದಲ್ಲಿ ಶೇ.50ರಷ್ಟುಸಂಸ್ಥೆಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.

ಸುಮಾರು 11 ಸಾವಿರ ಕಂಪನಿಗಳು ಟಿಡಿಎಸ್‌ ವಿಷಯದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿವೆ. ಆದರೆ, ಐಟಿ ರಿಟನ್ಸ್‌ರ್‍ ಸಲ್ಲಿಕೆ ಮಾಡಿಲ್ಲ. ಇದು ಸಹ ವಂಚನೆ ಮಾಡಿದಂತಾಗಲಿರುವ ಕಾರಣ ಅಷ್ಟುಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಕಂಪನಿಗಳಿಂದ ಸ್ಪಷ್ಟನೆ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

loader