ಬೆಂಗಳೂರು[ಅ.01]: ಕಳೆದ ನಾಲ್ಕು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಬಿಹಾರ ತತ್ತರಿಸಿದೆ. 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅನೇಕರು ತಮ್ಮ ಮನೆ, ಜಾನುವಾರುಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಿರುವಾಗ ಸಿಎಂ ನಿತೀಶ್ ಕುಮಾರ್ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಿಎಂ ಮೋದಿ ಬೇಕಾದ ಸಕಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿ ಮೋದಿ ಈ ಟ್ವೀಟ್ ಮಾಡಿರುವ ಬೆನ್ನಲ್ಲೇ ಕೇಂದ್ರದ ವಿರುದ್ಧ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದೆ.

ಹೌದು ಪ್ರವಾಹಕ್ಕೀಡಾಗಿರುವ ಬಿಹಾರಕ್ಕೆ ನೆರವು ನೀಡುವುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ. 'ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಳಿ ರಾಜ್ಯದಲ್ಲುಂಟಾಗಿರುವ ಪ್ರವಾಹದ ಕುರಿತು ಮಾಹಿತಿ ಪಡೆದುಕೊಂಡೆ. ಏಜೆನ್ಸಿಗಳು ಪ್ರವಾಹ ಸಂಸತ್ರಸ್ತರ ರಕ್ಷಣೆಗಾಗಿ ಸ್ಥಳೀಯ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿವೆ. ಕೇಂದ್ರ ಸರ್ಕಾರ ಕೂಡಾ ರಾಜ್ಯಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲಿದೆ' ಎಂದಿದ್ದಾರೆ.

ಬಿಹಾರ ಪ್ರವಾಹಕ್ಕೆ ಕೇಂದ್ರ ಸರ್ಕಾರ ಸಹಾಯದ ಭರವಸೆ ನೀಡಿರುವುದು ಶ್ಲಾಘನೀಯ. ಆದರೆ ಇದೇ ರೀತಿ ಕರ್ನಾಟಕದಲ್ಲೂ ಭೀಕರ ಪ್ರವಾಹ ಎದುರಾಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಸರ್ಕಾರದ ಈ ನಡೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಕರ್ನಾಟಕದಿಂದ 25 ಬಿಜೆಪಿ ಸಂಸದರು ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ, ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ಪ್ರಸ್ತುತ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಕೂಡಾ ರಾಜ್ಯಕ್ಕೇ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಭಾವಿ ನಾಯಕರು ಕೂಡಾ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಹೀಗಿದ್ದರೂ ಯಾವುದೇ ಕೇಂದ್ರ ಮಾತ್ರ ಮೌನ ವಹಿಸಿದೆ. ಗುಜರಾತ್, ಬಿಹಾರ್ ರಾಜ್ಯದ ನೆರವಿಗೆ ಧಾವಿಸಿದ್ದು, ಕರ್ನಾಟಕವನ್ನು ಕಡೆಗಣಿಸಿದೆ.

ಸದ್ಯ ಕೇಂದ್ರದ ಈ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಮಂದಿ ಖಂಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಿಹಾರ ಪ್ರವಾಹದ ಬಗ್ಗೆ ಮಿಡಿದ ಮೋದಿ ಅವರ 52 ಇಂಚಿನ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ? ಇದು 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ? ಇಲ್ಲ ಯಡಿಯೂರಪ್ಪ ಅವರ ಬಗ್ಗೆ ದ್ವೇಷವೇ?#NamoMissing' ಎಂದು ಪ್ರಶ್ನಿಸಿದ್ದಾರೆ.

ಇನ್ನು ಮೋದಿ ಟ್ವೀಟ್ ಗೆ ಅನೇಕ ಮಂದಿ ಕಮೆಂಟ್ ಮಾಡಿದ್ದು, ಕರ್ನಾಟಕದ ಕುರಿತಾಗಿ ಯಾಕಿಷ್ಟು ಅಸಡ್ಡೆ? ಕರ್ನಾಟಕ ಕೂಡಾ ಭಾರತದ ರಾಜ್ಯ. ಇಲ್ಲಿನ ಪ್ರವಾಹ ನಿಮಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.