ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗೂ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವ ಆರೋಪದ ಮೇಲೆ ಎಂಜಿನಿಯರಿಂಗ್ ಪದವೀಧರ ಸೇರಿ ಐದು ಮಂದಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮಾ.12): ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗೂ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವ ಆರೋಪದ ಮೇಲೆ ಎಂಜಿನಿಯರಿಂಗ್ ಪದವೀಧರ ಸೇರಿ ಐದು ಮಂದಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ವಿಕ್ರಮ್ ಇನ್‌ವೆಸ್ಟ್‌ಮೆಂಟ್ ಕಂಪನಿ ಮಾಲೀಕ ರಾಘವೇಂದ್ರ ಶ್ರೀನಾಥ್, ಏಜೆಂಟರಾದ ನರಸಿಂಹಮೂರ್ತಿ, ಪ್ರಹ್ಲಾದ್, ಕೆ.ಸಿ.ನಾಗರಾಜ್ ಹಾಗೂ ಸೂತ್ರಂ ಸುರೇಶ್ ಬಂಧಿತರು. ಬಾಲಾಜಿ ಅಗರಬತ್ತಿ ಕಂಪನಿಯ ಮಾಲೀಕ ಪಿ.ಆರ್.ಬಾಲಾಜಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದೂರುದಾರರು ಸೆಲೆಬ್ರೆಟಿಗಳಿಗೂ ವಂಚನೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇಲ್ಲಿಯತನಕ ದ್ರಾವಿಡ್ ಸೇರಿದಂತೆ ಯಾವೊಬ್ಬ ಸೆಲೆಬ್ರೆಟಿಯೂ ತಮಗೆ ವಂಚನೆಯಾಗಿದೆ ಎಂದು ದೂರು ನೀಡಿಲ್ಲ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಅಗರಬತ್ತಿ ಮಾಲಿಕರಿಗೆ 12 ಕೋಟಿ ವಂಚನೆ: ಬನಶಂಕರಿ ನಿವಾಸಿ ರಾಘವೇಂದ್ರ ಎಂಜಿನಿಯರಿಂಗ್ ವ್ಯಾಸಂಗದ ಬಳಿಕ ಸ್ವಂತವಾಗಿ ‘ವಿಕ್ರಮ್ ಇನ್‌ವೆಸ್ ್ಟಮೆಂಟ್’ ಕಂಪನಿ ತೆರೆದಿದ್ದ. ಯಶವಂತಪುರದಲ್ಲಿ ಮುಖ್ಯ ಕಚೇರಿಯನ್ನು ತೆರೆದು ಬನಶಂಕರಿಯ 2 ನೇ ಹಂತದಲ್ಲಿ ಕಂಪನಿ ಶಾಖೆ ಹೊಂದಿದ್ದ. ಕಂಪನಿಗೆ ಕೆಲವರನ್ನು ನೇಮಕ ಮಾಡಿಕೊಂಡಿದ್ದ. ಹಣವಂತರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಕಂಪನಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಲಾಭಾಂಶವನ್ನು ಕೊಡುತ್ತೇವೆ. ನಿಮ್ಮಿಂದ ಪಡೆದ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತೇವೆ ಎಂದು ಆಮಿಷವೊಡ್ಡುತ್ತಿದ್ದರು. ಮೊದಲಿಗೆ ಹಣ ನೀಡಿದವರಿಗೆ ನಂಬಿಕೆ ಬರುವಂತೆ ಮಾಡಲು ಲಾಭಾಂಶ ನೀಡಿದ್ದರು. ಹೂಡಿಕೆ ಮಾಡಿದವರು ಇದನ್ನು ನಂಬಿ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದ್ದರು. ಹೀಗೆ ಹಲವು ಮಂದಿ ವಿಕ್ರಮ್ ಇನ್‌ವೆಸ್ಟ್‌ಮೆಂಟ್ ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

ವಿಕ್ರಮ್ ಇನ್‌ವೆಸ್ಟ್‌ಮೆಂಟ್ ಬಗ್ಗೆ ಮಾಹಿತಿ ಹೊಂದಿದ್ದ ಬಾಲಾಜಿ ಹಾಗೂ ಅವರ ಸಹೋದರ ಭಾಸ್ಕರ್ 2016 ರಲ್ಲಿ ಕಂಪನಿಯ ಏಜೆಂಟ್ ನರಸಿಂಹಮೂರ್ತಿಯನ್ನು ಸಂಪರ್ಕಿಸಿದ್ದರು. ಜಯನಗರದ 7ನೇ ಹಂತದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಹಣ ಹೂಡಿಕೆ ಬಗ್ಗೆ ಚರ್ಚಿಸಿದ್ದರು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನರಸಿಂಹಮೂರ್ತಿ ನಂಬಿಸಿದ್ದ. ಬಳಿಕ ನರಸಿಂಹಮೂರ್ತಿ ಬಾಲಾಜಿ ಸಹೋದರರಿಗೆ ರಾಘವೇಂದ್ರನನ್ನು ಪರಿಚಯಿಸಿದ್ದ. ಇವರ ಮಾತಿಗೆ ಇನ್ನಷ್ಟು ಮರುಳಾದ ಬಾಲಜಿ ಸಹೋದರರು ಅಗರಬತ್ತಿ ಕಂಪನಿ ಖಾತೆಯಿಂದ ₹11.2 ಕೋಟಿ ಹಾಗೂ ಭಾಸ್ಕರ್ ಖಾತೆಯಿಂದ ₹54 ಲಕ್ಷ ಹಣವನ್ನು ವಿಕ್ರಮ್ ಇನ್‌ವೆಸ್ಟ್‌ಮೆಂಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಹಣ ಹೂಡಿಕೆ ಮಾಡಿ ಒಂದು ವರ್ಷ ಕಳೆದರೂ ಲಾಭಾಂಶ ನೀಡಿರಲಿಲ್ಲ. ಹೀಗಾಗಿ ಹೂಡಿಕೆ ಹಣ ವಾಪಸ್ ನೀಡುವಂತೆ ಬಾಲಾಜಿ ಕೇಳಿದ್ದರು. ಹೂಡಿಕೆ ಹಣವನ್ನು ವಾಸಪ್ ನೀಡದಿದ್ದಾಗ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

800 ಮಂದಿಗೆ ವಂಚನೆ: ಆರೋಪಿಗಳು ಸಿನಿಮಾ, ಕ್ರೀಡೆ, ರಾಜಕೀಯ ಕ್ಷೇತ್ರದ 800 ಕ್ಕೂ ಹೆಚ್ಚು ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಬಾಲಾಜಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕಂಪನಿಯಲ್ಲಿ ಯಾರೆಲ್ಲಾ ಎಷ್ಟು ಹಣ ತೊಡಗಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಕಂಪನಿಯ ಖಾತೆ ಬಗ್ಗೆ ಕೂಡ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು