ಚೀನಾ ನೆರವಿನಿಂದ ಪಾಕಿಸ್ತಾನ ನಿರ್ಮಿಸುತ್ತಿರುವ ಗ್ವಾದರ್ ಬಂದರಿಗೂ ಚಾಬಾಹರ್ಗೂ ಕೇವಲ 80 ಕಿ.ಮೀ. ಅಂತರವಿರುವುದರಿಂದ, ಗ್ವಾದರ್ ಬಂದರಿನ ಏಕಸ್ವಾಮ್ಯ ಮುರಿದು ಪಾಕಿಸ್ತಾನಕ್ಕೆ ಭಾರತ ಭರ್ಜರಿ ಸಡ್ಡು ಹೊಡೆದಂತಾಗಿದೆ.

ನವದೆಹಲಿ(ಡಿ.4): ಪಾಕಿಸ್ತಾನ ಪ್ರವೇಶಿಸದೇ ಆಫ್ಘಾನಿಸ್ತಾನ,ಇರಾನ್ ಹಾಗೂ ಕೇಂದ್ರ ಏಷ್ಯಾ ದೇಶಗಳಿಗೆ ಸರಕು ಸಾಗಿಸಲು, ಆಮದು ಮಾಡಿಕೊಳ್ಳಲು ಭಾರತಕ್ಕೆ ವ್ಯೂಹಾತ್ಮಕ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಇರಾನ್’ನ ಚಾಬಾಹರ್ ಬಂದರಿನ ವಿಸ್ತರಿತ ಯೋಜನೆಯ ಮೊದಲ ಹಂತ ಭಾನುವಾರ ಲೋಕಾರ್ಪಣೆಗೊಂಡಿದೆ.

ಚೀನಾ ನೆರವಿನಿಂದ ಪಾಕಿಸ್ತಾನ ನಿರ್ಮಿಸುತ್ತಿರುವ ಗ್ವಾದರ್ ಬಂದರಿಗೂ ಚಾಬಾಹರ್ಗೂ ಕೇವಲ 80 ಕಿ.ಮೀ. ಅಂತರವಿರುವುದರಿಂದ, ಗ್ವಾದರ್ ಬಂದರಿನ ಏಕಸ್ವಾಮ್ಯ ಮುರಿದು ಪಾಕಿಸ್ತಾನಕ್ಕೆ ಭಾರತ ಭರ್ಜರಿ ಸಡ್ಡು ಹೊಡೆದಂತಾಗಿದೆ. ಹೊಸದಾಗಿ ನಿರ್ಮಿತವಾದ ಬಂದರು ಭಾಗವನ್ನು ಭಾರತ, ಖತಾರ್, ಆಫ್ಘಾನಿಸ್ತಾನ ಹಾಗೂ ಇತರೆ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಉದ್ಘಾಟಿಸಿದರು. ಭಾರತದ ಪ್ರತಿನಿಧಿಯಾಗಿ ಹಡಗು ಖಾತೆ ರಾಜ್ಯ ಸಚಿವ ಮಸುಖ್ ಮಾಂಡವಿಯಾ ಅವರು ಇದ್ದರು.

2200 ಕೋಟಿ ವೆಚ್ಚದಲ್ಲಿ ಚಾಬಾಹರ್ ಬಂದರು ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಬಂದರು ಮೂಲಕ ಭಾರತ ತನ್ನ ಸರಕುಗಳನ್ನು ಕೇಂದ್ರ ಏಷ್ಯಾ ದೇಶಗಳಿಗೆ ತಲುಪಿಸಬಹುದಾಗಿದೆ. ಚಾಬಾಹರ್ ಅಭಿವೃದ್ಧಿ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ರೈಲು ಮಾರ್ಗ ಸೃಷ್ಟಿಗಾಗಿ ಭಾರತ 3200 ಕೋಟಿ ನೀಡಿದೆ. ಈ ಅಭಿವೃದ್ಧಿಯಿಂದಾಗಿ ಚಾಬಾಹರ್ ಬಂದರಿನ ಸಾಮರ್ಥ್ಯ ವಾರ್ಷಿಕ 25 ಲಕ್ಷ ಟನ್’ಗಳಿಂದ 85 ಲಕ್ಷ ಟನ್’ಗೆ ಏರಿಕೆಯಾದಂತಾಗಿದೆ. ಇದೇ ಬಂದರಿನ ಮೂಲಕ ಭಾರತ 1.30 ಲಕ್ಷ ಟನ್ ಗೋದಿಯನ್ನು ಆಫ್ಘಾನಿಸ್ತಾನಕ್ಕೆ ಸಾಗಿಸಲು ಉದ್ದೇಶಿಸಿದ್ದು, ಅದರ ಮೊದಲ ಕಂತು ಕಳೆದ ತಿಂಗಳಷ್ಟೇ ಆಫ್ಘಾನಿಸ್ತಾನ ತಲುಪಿದೆ.

ಚಾಬಾಹರ್’ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಭಾರತೀಯ ನೌಕಾಪಡೆ ಹಾಗೂ ವಾಯುಪಡೆಯ ನೆಲೆಗಳು ಕೂಡ ಇವೆ. ಚಾಬಾಹರ್ ಬಂದರು ಅಭಿವೃದ್ಧಿಗೆ ಸಂಬಂಸಿ ಎಲ್ಲ ಕಾಮಗಾರಿ ಮುಕ್ತಾಯಗೊಂಡು ಪೂರ್ಣ ಪ್ರಮಾಣದಲ್ಲಿ ಸೇವೆ ಲಭ್ಯವಾಗಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.