ಮಡಿಕೇರಿ: ಕಾವೇರಿ ನದಿ ನೀರಿನ ವಿಚಾರವಾಗಿ ಎರಡೂ ರಾಜ್ಯಗಳ ಜನನಾಯಕರು ಹೇಗೆ ಜನರಿಗೆ ಮೋಸ ಮಾಡಿದ್ದು, ವಾಸ್ತವ ಸ್ಥಿತಿ ಏನು ಎಂಬ ಬಗ್ಗೆ ಎರಡು ತಿಂಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಜಸ್ಟ್ ಆಸ್ಕಿಂಗ್’ ಅಭಿಯಾನ ಪ್ರಯುಕ್ತ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ಹರಿವು ಕ್ಷೀಣಿಸಿರುವುದು, ಅಕ್ರಮ ಮರಳುಗಾರಿಕೆ, ನೀರಿನ ಪೋಲು ಮೊದಲಾದ ವಿಚಾರಗಳ ಬಗ್ಗೆ ಮಾತನಾಡದ ರಾಜಕೀಯ ನಾಯಕರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.

ಕಾವೇರಿ ವಿಚಾರವಾಗಿ ತಜ್ಞರೊಂದಿಗೆ ಚರ್ಚಿಸಿ ವರದಿ ತಯಾರಿಸುತ್ತಿದ್ದು, ಎರಡು ತಿಂಗಳಲ್ಲಿ ಕಾವೇರಿ ಸತ್ಯವನ್ನು ಬಹಿರಂಗ ಮಾಡುತ್ತೇನೆ ಎಂದು ಪ್ರಕಾಶ್ ರೈ ಹೇಳಿದರು. ಇದೇ ವೇಳೆ ನದಿ ಜೋಡಣೆ ವಿಚಾರವಾಗಿ ಬಿಜೆಪಿ ಕಾಲೆಳೆದ ರೈ ಪ್ರಕೃತಿಗೆ ವಿರುದ್ಧವಾಗಿ ನದಿ ಹರಿವು ಬದಲಾವಣೆ ಮಾಡುವುದಕ್ಕಿಂತ ಬಿಜೆಪಿಯವರು ತಮ್ಮ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.

ಬಿಜೆಪಿ ಜೊತೆ ಜೆಡಿಎಸ್ ಸಖ್ಯ ಬೇಡ: ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಬಾರದು. ಪ್ರಾದೇಶಿಕ ಪಕ್ಷಗಳು ನಮ್ಮ ರಾಜ್ಯದಲ್ಲಿ ಗಟ್ಟಿಗೊಳ್ಳಬೇಕು. ಹೈಕಮಾಂಡ್ ಬಳಿ ಭಿಕ್ಷೆ ಬೇಡುವ ಸಂಸ್ಕೃತಿ ತೊಲಗಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನ ಹೋರಾಟ ಇದಕ್ಕಿಂತ ತೀವ್ರವಾಗಲಿದೆ ಎಂದರು.