ಬೀಜಿಂಗ್: ಬೆಂಗಳೂರಿನ ಮಧ್ಯಮ ವರ್ಗದವರು ಮನೆ ಬಾಡಿಗೆ 15-20 ಸಾವಿರ ರುಪಾಯಿ ಆಗಿಬಿಟ್ಟಿದೆ ಎಂದು  ಲೊಚಗುಟ್ಟುತ್ತಿರುತ್ತಾರೆ. ಇನ್ನು, ಕಾರನ್ನು ಫುಟ್‌ಪಾತಿನ ಮೇಲೆ ನಿಲ್ಲಿಸಿ ನೆಮ್ಮದಿಯಾಗಿರುತ್ತಾರೆ! ಆದರೆ, ಹಾಂಗ್‌ಕಾಂಗ್‌ನ ಜಿಲ್ಲೆಯೊಂದರಲ್ಲಿ ಮನೆ ಬಾಡಿಗೆಯ ಕತೆ ಕೇಳಬೇಡಿ, ಕೇವಲ ಕಾರು ಪಾರ್ಕಿಂಗ್ ಬಾಡಿಗೆಯೇ ತಿಂಗಳಿಗೆ 85000 ರು. ಆಗಿದೆ!

ಹೌದು, ಹಾಂಗ್‌ಕಾಂಗ್‌ನ ಕೊವ್ಲೆನ್ ಎಂಬ ಜಿಲ್ಲೆಯಲ್ಲಿ ಸ್ಥಿರಾಸ್ತಿ ಮೌಲ್ಯ ಎಷ್ಟು ದುಬಾರಿಯಾಗಿದೆ ಅಂದರೆ, 135  ಚದರಡಿಯ ಕಾರು ಪಾರ್ಕಿಂಗ್ ಜಾಗಕ್ಕೆ ಜನರು ತಿಂಗಳಿಗೆ 10 ಸಾವಿರ ಹಾಂಗ್‌ಕಾಂಗ್ ಡಾಲರ್ (85000 ರು.) ಪಾವತಿಸಬೇಕಾಗಿದೆ. ಹಾಂಗ್‌ಕಾಂಗ್‌ನ ಇತರ ಪ್ರದೇಶಗಳಿಗೆ ಹೋಲಿಸಿದರೂ ಇದು ಅತಿ ಹೆಚ್ಚು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. 

ಕೊವ್ಲೆನ್‌ನಲ್ಲಿ ಬಹಳಷ್ಟು ಮಂದಿ 1ಕ್ಕಿಂತ ಹೆಚ್ಚು ಕಾರು ಹೊಂದಿದ್ದಾರೆ. ಅದಕ್ಕೆ ವಿರುದ್ಧವಾಗಿ ಪ್ರತಿ ಕಟ್ಟಡದಲ್ಲೂ ಕೇವಲ ಶೇ.70 ರಷ್ಟು ಮನೆಗಳಿಗೆ ಮಾತ್ರ ಕಾರು ಪಾರ್ಕಿಂಗ್ ಲಭ್ಯವಿದೆ. ಹೀಗಾಗಿ ಪಾರ್ಕಿಂಗ್ ಜಾಗಕ್ಕೆ ಬೇಡಿಕೆ ಹೆಚ್ಚಿದೆ.