ಮುಂಗಡಪತ್ರ ಮಂಡನೆಯ ಮರುದಿವಸವೇ ಬಾಂಬೆ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆಗಳು ಭಾರಿ ಪ್ರಮಾಣದಲ್ಲಿ ತಳಕಚ್ಚಿವೆ. ಶುಕ್ರವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 840 ಅಂಕದಷ್ಟುಕುಸಿಯಿತು.

ನವದೆಹಲಿ : ಮುಂಗಡಪತ್ರ ಮಂಡನೆಯ ಮರುದಿವಸವೇ ಬಾಂಬೆ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆಗಳು ಭಾರಿ ಪ್ರಮಾಣದಲ್ಲಿ ತಳಕಚ್ಚಿವೆ. ಶುಕ್ರವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 840 ಅಂಕದಷ್ಟುಕುಸಿಯಿತು.

ಇದು ಎರಡೂವರೆ ವರ್ಷದ ಏಕದಿನದ ಗರಿಷ್ಠ ಕುಸಿತ. ಇನ್ನು ನಿಫ್ಟಿಕೂಡ 10,800 ಅಂಕಕ್ಕಿಂತ ಕಡಿಮೆ ಅಂಕಕ್ಕೆ ಇಳಿಕೆ ಕಂಡಿತು. ಇದರಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನ 153.1 ಲಕ್ಷ ಕೋಟಿ ರು.ನಿಂದ 148.4 ಲಕ್ಷ ಕೋಟಿ ರು.ಗೆ (4.7 ಲಕ್ಷ ಕೋಟಿ ರು.ನಷ್ಟು) ಕುಸಿಯಿತು.

ಗುರುವಾರ ಮಂಡನೆಯಾದ 2018-19ನೇ ಸಾಲಿನ ಬಜೆಟ್‌ನಲ್ಲಿ ಷೇರುಗಳ ಮೇಲೆ ಶೇ.10ರಷ್ಟುದೀರ್ಘಾವಧಿ ಬಂಡವಾಳ ಲಾಭ ತೆರಿಗೆ (ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌) ಹೇರಲಾಗಿದೆ. ಇದರಿಂದಾಗಿ ಷೇರುಪೇಟೆಯ ಹೂಡಿಕೆದಾರರು ಷೇರು ಆಧರಿತ ಮ್ಯೂಚುವಲ್‌ ಫಂಡ್‌ಗಳ ಆದಾಯಕ್ಕೆ ಶೇ.10ರಷ್ಟುತೆರಿಗೆ ನೀಡಬೇಕಾಗುತ್ತದೆ. ಇದು ಷೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣವಾಯಿತು.

ಇದೇ ವೇಳೆ ಫಿಚ್‌ ರೇಟಿಂಗ್‌ ಸಂಸ್ಥೆಯು ‘ಭಾರತ ಸರ್ಕಾರದ ಸಾಲದ ಭಾರದ ಕಾರಣ ಶ್ರೇಯಾಂಕ ಏರಿಕೆ ಕಷ್ಟವಾಗುತ್ತದೆ’ ಎಂದು ಹೇಳಿತ್ತು. ಜತೆಗೆ, ಬಜೆಟ್‌ನಲ್ಲಿ ವಿತ್ತೀಯ ಕೊರತೆಯು ಈ ಹಿಂದಿನ ಶೇ.3.2ರ ಬದಲು ಶೇ.3.5ರಷ್ಟುಇರಲಿದೆ ಎಂದು ತಿಳಿಸಲಾಯಿತು. ಇದೂ ಕೂಡ ಕುಸಿತಕ್ಕೆ ಇನ್ನೊಂದು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಸೆನ್ಸೆಕ್ಸ್‌ ಶುಕ್ರವಾರ 839.91 ಅಂಕ ಕುಸಿದು 35,066 ಅಂಕಗಳಲ್ಲಿ ವಹಿವಾಟು ಮುಗಿಸಿತು. ಇದು 2015ರ ಆಗಸ್ಟ್‌ 24ರ ನಂತರದ ಅತಿ ಗರಿಷ್ಠ ಏಕದಿನದ ಕುಸಿತ. ಅಂದು ಸೆನ್ಸೆಕ್ಸ್‌ 1,624 ಅಂಕ ಪತನಗೊಂಡಿತ್ತು. ಇನ್ನು ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 256.30 ಅಂಕ (ಶೇ.2.33) ಕುಸಿದು 10,760.60 ಅಂಕಕ್ಕೆ ವಹಿವಾಟು ಮುಗಿಸಿತು.

ರಾಹುಲ್‌ ವ್ಯಂಗ್ಯ: ಈ ನಡುವೆ ಷೇರುಪೇಟೆಯ ಭಾರೀ ಕುಸಿದ ಬಗ್ಗೆ ಪ್ರಧಾನಿ ಮೋದಿ ಅವರ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಇದು ಮೋದಿ ಬಜೆಟ್‌ ವಿರುದ್ಧ ಸೆನ್ಸೆಕ್ಸ್‌ ಮಂಡಿಸಿದ ನೋ ಕಾನ್ಫಿಡೆನ್ಸ್‌ ಮೋಷನ್‌ ಎಂದು ಟ್ವೀಟ್‌ ಮಾಡಿದ್ದಾರೆ.