ಬಿಜೆಪಿಯಲ್ಲೀಗ ಮಹತ್ವದ ಬದಲಾವಣೆಯೊಂದು ನಡೆದಿದೆ. 11 ಮುಖಂಡರು ಪಕ್ಷದಿಂದ ಔಟ್ ಆಗಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಇದೊಂದು ಶಾಕ್ ಆಗಿದೆ.
ಜೈಪುರ : ದೇಶದ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ವಿವಿಧ ಪಕ್ಷಗಳು ಸೂಕ್ತ ತಯಾರಿಯಲ್ಲಿ ತೊಡಗಿಕೊಂಡಿವೆ. ರಾಜಸ್ಥಾನದಲ್ಲಿಯೂ ಕೂಡ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಟಿಕೆಟ್ ಗಾಗಿ ಪಕ್ಷದಲ್ಲಿ ನಾಯಕರ ನಡುವಿನ ಮುನಿಸು ಇದೀಗ ಬಹಿರಂಗವಾಗುತ್ತಿದೆ.
ಇದೀಗ ರಾಜಸ್ಥಾನದಲ್ಲಿ ಬಿಜೆಪಿಗೆ ಸಡ್ಡುಹೊಡೆದು ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದ 11 ಮುಖಂಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.
ವಸುಂಧರಾ ರಾಜೆ ಸಂಪುಟದ ನಾಲ್ವರು ಸಚಿವರು ಸೇರಿದಂತೆ ಒಟ್ಟು 11 ಮುಖಂಡರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.
ಪ್ರಮುಖ ಬಿಜೆಪಿ ಮುಖಂಡರಾದ ಸುರೇಂದ್ರ ಗೋಯಲ್, ಲಕ್ಷ್ಮೀನಾರಾಯಣ್ ದುಬೆ, ರಾಧೆಶ್ಯಾಮ್ ಗಂಗಾನಗರ್ ಸೇರಿದಂತೆ ಒಟ್ಟು 11 ಮುಖಂಡರನ್ನು ಪಕ್ಷ ಉಚ್ಛಾಟಿಸಿ ನಿರ್ಧಾರ ಕೈಗೊಂಡಿದೆ.
ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಲಭ್ಯವಾಗದೇ ಬಂಡಾಯವಾಗಿ ನಾಮಪತ್ರ ಸಲ್ಲಿಕೆ ಮಾಡಿ, ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿದಿದ್ದ ಶಾಸಕ ಗ್ಯಾನ್ ದೇವ್ ಅಹುಜಾ ಇದೀಗ ಮತ್ತೆ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ರಾಜಸ್ಥಾನದಲ್ಲಿ ಇದೇ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಪ್ರಕಟವಾಗುತ್ತಿದೆ.
