ಐಜವಲ್: ದೇಶಾದ್ಯಂತ ಕಾಂಗ್ರೆಸ್-ಬಿಜೆಪಿ ಬದ್ಧ ವೈರಿಗಳಂತೆ ವರ್ತಿಸುತ್ತವೆ. ಆದರೆ ಮಿಜೋರಾಂನ ಚಕ್ಮಾ ಸ್ವಾಯತ್ತ ಜಿಲ್ಲಾ ಮಂಡಳಿ (ಸಿಎಡಿಸಿ) ಆಡಳಿತ ನಡೆಸಲು ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟಕ್ಕೆ ಬುಧವಾರ ಆಹ್ವಾನ ನೀಡಲಾಗಿದೆ.

ಬಾಂಗ್ಲಾ ಮತ್ತು ಮ್ಯಾನ್ಮಾರ್ ಗಡಿಭಾಗದ ಮಿಜೋರಾಂನಲ್ಲಿ ವಾಸಿಸುತ್ತಿರುವ ಚಕ್ಮಾ ಸಮುದಾಯದ ಜನರಿಗಾಗಿ ರಚಿಸಲಾಗಿರುವ ಸ್ವಾಯತ್ತೆ ಮಂಡಳಿ ಸಿಎಡಿಸಿ, ಯುನೈಟೆಡ್ ಶಾಸಕಾಂಗೀಯ ಪಕ್ಷ (ಯುಎಲ್‌ಪಿ) ಕ್ಕೆ ಕಾರ್ಯನಿರ್ವಾಹಕ ಸಮಿತಿ ರಚಿಸುವಂತೆ ರಾಜ್ಯಪಾಲ ಲೆ.ಜ. ನಿರ್ಭಯ್ ಶರ್ಮಾ ಆಹ್ವಾನ ನೀಡಿದ್ದಾರೆ. 

ಯುಎಲ್‌ಪಿ ನಾಯಕರಾಗಿ ಬಿಜೆಪಿಯ ಶಾಂತಿ ಜಿಬನ್ ಚಕ್ಮಾರ ಆಯ್ಕೆ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಸದಸ್ಯರ ನೇಮಕಕ್ಕೆ ಸಲ್ಲಿಸಲಾಗಿರುವ ಮನವಿಯನ್ನು ಶರ್ಮಾ ಒಪ್ಪಿದ್ದಾರೆ. 20 ಸದಸ್ಯರ ಮಂಡಳಿಗೆ ಏ.20 ರಂದು ನಡೆದ ಚುನಾವಣೆಯಲ್ಲಿ ಎಂಎನ್‌ಎಫ್ 8, ಬಿಜೆಪಿ 6, ಕಾಂಗ್ರೆಸ್ 5 ಸ್ಥಾನ ಪಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.