ಬಿಶ್ಕೇಕ್(ಜೂ.14): ಕಿರ್ಗಿಸ್ತಾನದ ಬಿಶ್ಕೇಕ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ(SCO)ಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕೊಟ್ಟಿರುವ ಏಟಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತತ್ತರಿಸಿ ಹೋಗಿದ್ದಾರೆ.

ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳು ತಮ್ಮ ಕೃತ್ಯಗಳಿಗೆ ಜವಾಬ್ದಾರಿಯುತವಾಗಿರಬೇಕು ಎಂದು ಹೇಳುವ ಮೂಲಕ ಮೋದಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.

SCO ಸಭೆಯಲ್ಲಿ ಮಾತನಾಡಿದ ಮೋದಿ, ಭಾರತ SCO ಖಾಯಂ ಸದಸ್ಯತ್ವ ಪಡೆದು 12 ವರ್ಷಗಳಾಗುತ್ತಿದ್ದು, ಶೃಂಗಸಭೆಯ ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲೂ ಸಕಾರಾತ್ಮಕ ಕೊಡುಗೆ ನೀಡಿದ್ದಾಗಿ ಹೇಳಿದರು.

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ SCO ಪಾತ್ರ ಮತ್ತು ವಿಶ್ವಾಸಾರ್ಹತೆಯನ್ನು ವೃದ್ಧಿಸುವ ಕೆಲಸ ಮಾಡಿದ್ದು, ಇದನ್ನು ಮುಂದುವರೆಸುವುದಾಗಿ ಮೋದಿ ಭರವಸೆ ನೀಡಿದರು.

ಇದಕ್ಕೂ ಮೊದಲು ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಜೊತೆಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದಿಂದ ಶಾಂತಿಗೆ ಧಕ್ಕೆ ಬರುತ್ತಿದೆ ಎಂದು ಈ ವೇಳೆ ಮೋದಿ ನೇರವಾಗಿ ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇರಾನ್‌ ಅಧ್ಯಕ್ಷ ಡಾ ಹಸನ್ ರೂಹಾನಿ ಅವರೊಂದಿಗೆ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ, ಮಂಗೋಲಿಯಾ ಅಧ್ಯಕ್ಷ ಖಾಲ್ತಾಮಜಿನ್ ಬ್ಯಾಟುಗಲ್ ಮತ್ತು ಕಝಕಿಸ್ತಾನ್ ಅಧ್ಯಕ್ಷ ಕಾಸಿಮ್ ಜಾರ್ಮಾಟ್ ಅವರೊಂದಿಗೂ ಮೋದಿ ಮಾತುಕತೆ ನಡೆಸಲಿದ್ದಾರೆ.